ಬೆಂಗಳೂರು : ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉಚಿತ ಚಿಕಿತ್ಸೆ ಒದಗಿಸುವ ಕಾರ್ಯಕ್ರಮದಡಿ, ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆ (ಬಿಎಂಜೆಎಚ್)ಕಳೆದ ವರ್ಷ 191 ಗೂನುಬೆನ್ನು ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದು, ಈ ವರ್ಷ 300 ಉಚಿತ ಶಸ್ತ್ರಚಿಕಿತ್ಸೆಗಳನ್ನು ನಡೆಸುವ ಗುರಿಯನ್ನು ಹೊಂದಿದೆ. ವಿಶ್ವ ಬೆನ್ನುಮೂಳೆ ಆರೋಗ್ಯ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಈ ಬಗ್ಗೆ ಘೋಷಿಸಲಾಯಿತು.
ಪ್ರತಿ ಶಸ್ತ್ರಚಿಕಿತ್ಸೆಗೆ ಸರಾಸರಿ 5.5 ಲಕ್ಷ ವೆಚ್ಚವಾಗಲಿದ್ದು, ದಾನಿಗಳು, ಸರ್ಕಾರ, ಆಸ್ಪತ್ರೆ ಹಾಗೂ ವೈದ್ಯರ ಸಹಯೋಗದೊಂದಿಗೆ ಈ ಕಾರ್ಯನಡೆಯಲಿದೆ. ಬೆನ್ನುಮೂಳೆಯು ಅಸಹಜವಾಗಿ ವಕ್ರವಾಗುವ ಗೂನುಬೆನ್ನು ಕಾಯಿಲೆಗೆ ವಿಶೇಷ ವೈದ್ಯಕೀಯ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಮಕ್ಕಳಿಗೆ ನೆರವಾಗುವ ಉದ್ದೇಶದಿಂದ, ಕರ್ನಾಟಕ ಸರ್ಕಾರದ ಸಹಭಾಗಿತ್ವದಲ್ಲಿ 2023ರಲ್ಲಿ ಈ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆರಂಭಿಸಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಮಕ್ಕಳನ್ನು ಗುರುತಿಸಿ ಶಸ್ತ್ರಚಿಕಿತ್ಸೆ ನೀಡಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್, ಈ ಉಪಕ್ರಮವು ಆರೋಗ್ಯ ಕ್ಷೇತ್ರದಲ್ಲಿನ ಮಹತ್ವದ ಕೊರತೆಯನ್ನು ನೀಗಿಸುತ್ತಿದೆ. ಶಸ್ತ್ರಚಿಕಿತ್ಸೆಯ ಹೆಚ್ಚಿನ ವೆಚ್ಚ, ವಿಶೇಷ ಪರಿಣತಿಯ ಅಗತ್ಯ, ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಮತ್ತು ತೀವ್ರ ನಿಗಾ ಸೌಲಭ್ಯಗಳಿಗೆ ಮಾಡಬೇಕಾದ ಹೂಡಿಕೆ ಇವೆಲ್ಲವೂ ಈ ಚಿಕಿತ್ಸೆಯನ್ನು ಸಾಮಾನ್ಯ ಕುಟುಂಬಗಳಿಗೆ ಕಷ್ಟಕರವಾಗಿಸಿವೆ. ಈ ಚಿಕಿತ್ಸೆಯು ಅನೇಕ ಮಕ್ಕಳ ಜೀವನದಲ್ಲಿ ಮಹತ್ವದ ಬದಲಾವಣೆ ತಂದಿದ್ದು, ಇಂತಹ ದುಬಾರಿ ಶಸ್ತ್ರಚಿಕಿತ್ಸೆಗಳ ವೆಚ್ಚವನ್ನು ಭರಿಸಲು ಕಷ್ಟಪಡುತ್ತಿದ್ದ ಕುಟುಂಬಗಳಿಗೆ ದೊಡ್ಡ ಮಟ್ಟದ ನೆಮ್ಮದಿ ನೀಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಎಂಜೆಎಚ್ನ ಮೋಹನಲಾಲ್ ರಾಂಕಾ, ವಿಮಲ್ ಭಂಡಾರಿ, ಬೆನ್ನುಮೂಳೆ ಮತ್ತು ಕೀಲು ಶಸ್ತ್ರಚಿಕಿತ್ಸಾ ತಜ್ಞ ಡಾ. ಮಹೇಶ್ ಬಿಜ್ಜಾವರ ಮತ್ತಿತರರು ಉಪಸ್ಥಿತರಿದ್ದರು.
ದಾನಿಗಳ ನೆರವಿನೊಂದಿಗೆ ಆರೋಗ್ಯ ಸೇವೆ ಒದಗಿಸುವ ಈ ಮಾದರಿಯನ್ನು ಆಸ್ಪತ್ರೆಯ ಇತರ ವಿಭಾಗಗಳಿಗೂ ವಿಸ್ತರಿಸುವ ಉದ್ದೇಶವಿದೆ. ಇತ್ತೀಚೆಗೆ ಹೃದ್ರೋಗ ವಿಭಾಗದ ಉಪಕ್ರಮಕ್ಕೆ ಗಮನ ಸೆಳೆದ ಬಳಿಕ, ವಿಶ್ವ ಬೆನ್ನುಮೂಳೆಯ ಆರೋಗ್ಯ ದಿನದ ಕಾರ್ಯಕ್ರಮವು ವೈದ್ಯರು ಇಂತಹ ದತ್ತಿ ವೈದ್ಯಕೀಯ ಯೋಜನೆಗಳನ್ನು ರೂಪಿಸಲು ಪ್ರೇರೇಪಿಸುವ ಮತ್ತೊಂದು ಹೆಜ್ಜೆಯಾಗಿದೆ.ಪಾರಸ್ ಜೈನ್, ಬಿಎಂಜೆಎಚ್ ಕಾರ್ಯದರ್ಶಿ