Haveri Fire Accident 
ರಾಜ್ಯ

ಹಾವೇರಿ: ಬೆಂಕಿಯ ಕೆನ್ನಾಲಿಗೆಗೆ 17 ಎಮ್ಮೆಗಳು ಸಜೀವ ದಹನ! | Haveri Fire Accident

ಹಾವೇರಿ: ಜಿಲ್ಲೆಯ ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು (Haveri Fire Accident), ದನದ ಕೊಟ್ಟಿಗೆಗೆ ಬೆಂಕಿ ಬಿದ್ದ ಪರಿಣಾಮ 17 ಎಮ್ಮೆಗಳು ಸಜೀವವಾಗಿ ದಹನಗೊಂಡಿರುವ ಘೋರ ಘಟನೆ ಶುಕ್ರವಾರ ನಡೆದಿದೆ.
ಗ್ರಾಮದ ರೈತ ಪರಮೇಶ ಜಾಡರ ಎಂಬುವವರಿಗೆ ಸೇರಿದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಕ್ಷಣಮಾತ್ರದಲ್ಲಿ ಬೆಂಕಿ ವ್ಯಾಪಿಸಿದ್ದು, ಕೊಟ್ಟಿಗೆಯಲ್ಲಿದ್ದ 4 ಎಮ್ಮೆ ಕರುಗಳು ಸೇರಿದಂತೆ ಒಟ್ಟು 17 ಎಮ್ಮೆಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿವೆ. ಅಷ್ಟೇ ಅಲ್ಲದೆ, ಜಾನುವಾರುಗಳ ಮೇವಿಗಾಗಿ ಸಂಗ್ರಹಿಸಿಟ್ಟಿದ್ದ ಎರಡು ಹುಲ್ಲಿನ ಬಣವಿಗಳು ಹಾಗೂ ಕೃಷಿ ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ.
ಈ ದುರ್ಘಟನೆಯಲ್ಲಿ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಜಾನುವಾರುಗಳು ಹಾಗೂ ಸಾಮಗ್ರಿಗಳು ನಾಶವಾಗಿವೆ ಎಂದು ಅಂದಾಜಿಸಲಾಗಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಗ್ರಾಮಸ್ಥರು ಅದನ್ನು ನಂದಿಸಲು ಹರಸಾಹಸ ಪಟ್ಟರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.