ನಾಯಿ ಕಡಿತ ಪ್ರಕರಣಗಳ ಹೆಚ್ಚಳ
- * 2 ತಿಂಗಳಲ್ಲಿ 1.24 ಲಕ್ಷ ಅಧಿಕ ನಾಯಿ ಕಡಿತ ಪ್ರಕರಣ ದಾಖಲು
ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ನಾಯಿ ಕಡಿತದ ಪ್ರಕರಣ ಹೆಚ್ಚುತ್ತಿದ್ದು, ಈ ವರ್ಷದ ಆರಂಭದಲ್ಲೇ (ಜ. 1 ರಿಂದ ಮಾ.1ರವರೆಗೆ) 1,24,593 ನಾಯಿ ಕಡಿತ ಪ್ರಕರಣ ದಾಖಲಾಗಿದ್ದು, 15 ಸಾವು ಸಂಭವಿಸಿವೆ.
ಕಳೆದ ವರ್ಷ (2025) 4,95,160 ನಾಯಿ ಕಡಿತ ಪ್ರಕರಣ ದಾಖಲಾಗಿದ್ದು, ರೇಬಿಸ್‌ನಿಂದಾಗಿ 49 ಮಂದಿ ಮೃತಪಟ್ಟಿದ್ದರು. 2024ರಲ್ಲಿ 3,57,600 ಪ್ರಕರಣಗಳಲ್ಲಿ 5 ಸಾವು ಸಂಭವಿಸಿದ್ದವು. ಈ ವರ್ಷಾರಂಭದ ಎರಡು ತಿಂಗಳಲ್ಲೇ ಒಂದು ಲಕ್ಷಕ್ಕೂ ಅಧಿಕ ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದು, 15 ಜನ ಮೃತಪಟ್ಟಿದ್ದಾರೆ. ವರ್ಷದಿಂದ ವರ್ಷಕ್ಕೆ ನಾಯಿ ಕಡಿತ ಪ್ರಕರಣ ಏರಿಕೆಯಾಗುತ್ತಿರುವುದು ಜನರಲ್ಲಿ ಭೀತಿ ಸೃಷ್ಟಿಸಿದೆ.
ರಾಜ್ಯ ಆರೋಗ್ಯ ಇಲಾಖೆಯ ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮದ (ಐಎಚ್‌ಐಪಿ) ಮಾಹಿತಿ ಪ್ರಕಾರ, ಕಳೆದ ಒಂದು ವಾರದಲ್ಲಿಯೇ 13,862 (ಒಂದು ಸಾವು) ಕಡಿತ ಪ್ರಕರಣ ವರದಿಯಾಗಿವೆ. ತಿಂಗಳಿಗೆ 60 ಸಾವಿರಕ್ಕೂ ಅಧಿಕ ಪ್ರಕರಣಗಳಂತೆ ಎರಡು ತಿಂಗಳಲ್ಲಿ 1.24 ಲಕ್ಷ ಅಧಿಕ ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೂಚಿಸಬಹುದಾದ ರೋಗ:
ಮಾನವ ರೇಬಿಸ್ ಅನ್ನು ಕ್ರೋಧೋನ್ಮತ್ತ ಪ್ರಾಣಿಗಳ (ಮುಖ್ಯವಾಗಿ ನಾಯಿಗಳು) ಕಡಿತದಿಂದ ಹರಡುವ ಮಾರಕ ವೈರಲ್ ಕಾಯಿಲೆ ಎಂದು ಗುರುತಿಸಿ, ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ- 2020ರಡಿ ಅಧಿಸೂಚಿತ ರೋಗವೆಂದು ಸರ್ಕಾರ 2022ರಲ್ಲಿ ಘೋಷಿಸಿದೆ. ಎಲ್ಲ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸೌಲಭ್ಯಗಳು (ವೈದ್ಯಕೀಯ ಕಾಲೇಜುಗಳು ಸೇರಿ) ಎಲ್ಲ ಶಂಕಿತ, ಸಂಭವನೀಯ ಮತ್ತು ದೃಢಪಡಿಸಿದ ಮಾನವ ರೇಬಿಸ್ ಪ್ರಕರಣಗಳನ್ನು ರಾಜ್ಯ ಆರೋಗ್ಯ ಇಲಾಖೆಗೆ ವರದಿ ಮಾಡುವುದು ಕಡ್ಡಾಯವಾಗಿದೆ.
ನಾಯಿ ಕಡಿತಕ್ಕೆ ಸರ್ಕಾರ ಉಚಿತ ಚಿಕಿತ್ಸೆ ಮತ್ತು ಲಸಿಕೆ ಹಾಗೂ ಮೃತಪಟ್ಟವರಿಗೆ ಪರಿಹಾರ ನೀಡುತ್ತದೆ. ಅದರಿಂದ ಹೋದ ಜೀವ ಬಾರದು. ಬೀದಿಗಳಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಓಡಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸುವ ಅಗತ್ಯವಿದೆ.