ಕಲಬುರಗಿ: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಹಾಕಲು ಬೇಸಿಗೆ ಶಿಬಿರಗಳು ಅತ್ಯುತ್ತಮ ವೇದಿಕೆಯಾಗಿದ್ದು, ಪಾಲಕರು ಕೇವಲ ಅಂಕಗಳಿಗೆ ಆದ್ಯತೆ ನೀಡಿ ಮಕ್ಕಳನ್ನು ಯಂತ್ರಗಳನ್ನಾಗಿ (ರೋಬೋಟ್) ಮಾಡಬಾರದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ರಾಜಕುಮಾರ ರಾಠೋಡ ತಿಳಿಸಿದರು.
ಶುಕ್ರವಾರ ನಗರದ ರಂಗಾಯಣ ಸಭಾಂಗಣದಲ್ಲಿ ರಾಜ್ಯ ಬಾಲ ಭವನ ಸೊಸೈಟಿ ಬೆಂಗಳೂರು, ಜಿಲ್ಲಾ ಪಂಚಾಯತ್ ಕಲಬುರಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನ ಸಮಿತಿ ಹಾಗೂ ರಂಗಾಯಣ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ 5 ರಿಂದ 16 ವರ್ಷದ ಮಕ್ಕಳಿಗಾಗಿ ಹಮ್ಮಿಕೊಳ್ಳಲಾಗಿರುವ 15 ದಿನಗಳ ಜಿಲ್ಲಾ ಮಟ್ಟದ ಉಚಿತ ಬೇಸಿಗೆ ಶಿಬಿರದ ಸಮಾರಂಭ ಉದ್ಘಾಟಿಸಿ ಗಿಡಕ್ಕೆ ನೀರುಣಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪಾಲಕರು ಕೇವಲ ಅಂಕ ಗಳಿಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವುದರಿಂದ, ಮಕ್ಕಳು ತಮ್ಮಲ್ಲಿರುವ ನೈಜ ಪ್ರತಿಭೆ, ಆಸೆ ಮತ್ತು ಆಕಾಂಕ್ಷೆಗಳನ್ನು ವ್ಯಕ್ತಪಡಿಸಲು ವಿಫಲರಾಗುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಬಾಲ ಭವನ ಸೊಸೈಟಿಯ ರಾಜ್ಯ ಉಪಾಧ್ಯಕ್ಷರಾದ ಅನಿಲ ಕುಮಾರ್ ಜಮಾದಾರ್ ಅವರು ಮಾತನಾಡಿ, "ಮೇ 15 ರಿಂದ ಮೇ 29 ರವರೆಗೆ ನಡೆಯುವ ಈ ಬೇಸಿಗೆ ಶಿಬಿರದ ಸದುಪಯೋಗವನ್ನು ಎಲ್ಲಾ ಮಕ್ಕಳು ಪಡೆದುಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳನ್ನು ಎಲ್ಲರೊಂದಿಗೆ ಬೆರೆಯುವಂತೆ ಪ್ರೇರೇಪಿಸಬೇಕು ಹಾಗೂ ವಿದ್ಯಾಭ್ಯಾಸದ ಜೊತೆಗೆ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಲು ಉತ್ತೇಜನ ನೀಡಬೇಕು" ಎಂದು ಕರೆ ನೀಡಿದರು.
ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ವಿಶ್ವಾರಾಧ್ಯ ಇಜೇರಿ ಅವರು ಮಾತನಾಡಿ, "ಅಂಕಗಳಿಕೆಗಾಗಿ ಪಾಲಕರು ಮಕ್ಕಳ ಮೇಲೆ ಮಾನಸಿಕ ಒತ್ತಡ ಹೇರುತ್ತಿದ್ದಾರೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆಗಳು ಅತ್ಯಗತ್ಯ. ಅದರೊಂದಿಗೆ ಭಾರತದ ಅಮೂಲ್ಯವಾದ ಸಂಸ್ಕೃತಿಯನ್ನು ಪ್ರತಿಯೊಂದು ಮಗುವಿನಲ್ಲೂ ಅಳವಡಿಸುವಲ್ಲಿ ಪಾಲಕರ ಪಾತ್ರ ಬಹುಮುಖ್ಯವಾಗಿದೆ" ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀಕ್ಷಕರಾದ ಶೋಭಾ, ಇಲಾಖೆಯ ಸಿಬ್ಬಂದಿ, ಸಂಪನ್ಮೂಲ ಲಪ ವ್ಯಕ್ತಿಗಳು, ಪಾಲಕರು ಹಾಗೂ ಮುದ್ದು ಮಕ್ಕಳು ಉಪಸ್ಥಿತರಿದ್ದರು