1,450 cases settled in Lok Adalat
ಪಾವಗಡ: ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಬೃಹತ್ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ರಾಜಿ ಸಂಧಾನದ ಮೂಲಕ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ ಎರಡು ಜೋಡಿಯನ್ನು ಒಂದು ಗೂಡಿಸಲಾಯಿತು.
ಬೆಳಗ್ಗೆಯಿಂದಲೇ ನ್ಯಾಯಾಲಯದ ಆವರಣ ಜನರಿಂದ ತುಂಬಿತ್ತು. ಸಾವಿರಾರು ಮಂದಿ ಸೇರಿದ್ದರು. ಬೆಳಗ್ಗೆ 10ರಿಂದ ಆರಂಭವಾದ ಅದಾಲತ್ನಲ್ಲಿ ನ್ಯಾಯಾಧೀಶ ವಿ.ಮಾದೇಶ 122 ಪ್ರಕರಣಗಳ ಪೈಕಿ 37 ಪ್ರಕರಣಗಳನ್ನು ಇತ್ಯರ್ಥಪಡಿಸಿದರು. 63.60 ಲಕ್ಷ ಮೊತ್ತದ ಚೆಕ್ ಬೌನ್ಸ್, ಸಾಲ, ಕರಾರು ಸೇರಿ ವಿವಿಧ ಪ್ರಕರಣಗಳು ಇತ್ಯರ್ಥವಾದವು. ನ್ಯಾಯಾಧೀಶೆ ಸಿ.ಎನ್.ಮುನಿರತ್ನಮ್ಮ 879 ಪ್ರಕರಣಗಳ ಪೈಕಿ, 878 ಪ್ರಕರಣಗಳನ್ನು ಬಗೆಹರಿಸಿದರು. 29.35 ಲಕ್ಷ ರೂ. ಮೌಲ್ಯದ ದಾವೆಗಳನ್ನು ಇತ್ಯರ್ಥಪಡಿಸಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆಪಲ್ಲವಿ 549 ಪ್ರಕರಣಗಳ ಪೈಕಿ, 535 ಪ್ರಕರಣಗಳನ್ನು ಬಗೆಹರಿಸಿದರು.11.56 ಲಕ್ಷ ರೂ. ಮೊತ್ತದ ದಾವೆಗಳನ್ನು ಇತ್ಯರ್ಥಪಡಿಸಿದರು.
ಪಟ್ಟಣದ ಒಟ್ಟು ಮೂರು ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ತೆಗೆದುಕೊಂಡಿದ್ದ 1550 ಪ್ರಕರಣಗಳ ಪೈಕಿ 1450 ಪ್ರಕರಣಗಳನ್ನು ಕಕ್ಷಿದಾರರು ಪರಸ್ಪರ ರಾಜಿ ಸಂಧಾನದ ಮೂಲಕ ಪರಿಹರಿಸಲಾಯಿತು.
ಒಟ್ಟು 1.45 ಕೋಟಿ ರೂ. ಮೊತ್ತದ ದಾವೆಗಳನ್ನು ಬಗೆಹರಿಸಲಾಯಿತು. ಈ ವೇಳೆ ನ್ಯಾಯಾಲಯ ಸಿಬ್ಬಂದಿ ಜಾವೀದ್ ಅಹಮದ್ ಪತ್ತೇಪುರ್, ರಂಗನಾಥ್, ಶ್ರೀನಿವಾಸ ರೆಡ್ಡಿ, ಉಮೇಶ್, ಕೃಷ್ಣಮೂರ್ತಿ ಉಪಸ್ಥಿತರಿದ್ದರು.