- ಅಕ್ಕಲಕೋಟ ತಾಲೂಕಿನ ಬಬಲಾದ ಜಿಲ್ಲಾ ಪರಿಷತ್ ಕನ್ನಡ ಶಾಲೆಯಲ್ಲಿ ಛಾವಣಿ ಪದರು ಕುಸಿತ
ಅಕ್ಕಲಕೋಟ: ಬಬಲಾದ ಗ್ರಾಮದ ಜಿಲ್ಲಾ ಪರಿಷತ್ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಮಂಗಳವಾರ ಬೆಳಗ್ಗೆ ಪ್ರಾರ್ಥನೆ ಬಳಿಕ ಛಾವಣಿ ಕಾಂಕ್ರೀಟ್ ಪದರು ಕುಸಿದು ಬಿದ್ದು 13 ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಗಾಯಗೊಂಡಿದ್ದಾರೆ.
ಎಂದಿನಂತೆ ಪ್ರೇಯರ್ ಬಳಿಕ ಕ್ಲಾಸ್ ರೂಮ್ಗೆ ಸಾಲಿನಲ್ಲಿ ತೆರಳುತ್ತಿದ್ದಾಗ ಏಕಾಏಕಿ ಮೇಲ್ಛಾವಣಿ ಸಿಮೆಂಟ್ ಪದರು ಕಳಚಿ ಬೀಳುತ್ತಿದ್ದಂತೆ ಆತಂಕದ ಸ್ಥಿತಿ ಉಂಟಾಯಿತು. ಕಾಂಕ್ರೀಟ್ ಪದರಿನಡಿ ಸಿಲುಕಿದ್ದ ಕೆಲ ಮಕ್ಕಳನ್ನು ಶಿಕ್ಷಕರು ಹೊರತೆಗೆದಿದ್ದು, ಗಾಯಗೊಂಡ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಾದ ರಮೇಶ ಶಿವಮೂರ್ತಿ, ಭೀಮಣ್ಣ ಗವಳಿ ಅವರನ್ನು ಮೈಂದರ್ಗಿ ಮತ್ತು ದುಧನಿ ಆರೋಗ್ಯ ಕೇಂದ್ರಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಗಂಭೀರ ಗಾಯಗೊಂಡಿರುವ ಪ್ರಜ್ವಲ್ ಬೋಳದೆ ಹಾಗೂ ಪ್ರಶಾಂತ ಚಾಂಬಾರ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಕ್ಕಲಕೋಟಗೆ ಕಳುಹಿಸಲಾಗಿದೆ.
ವಿಷಯ ತಿಳಿಯುತ್ತಲೇ ಪಂಚಾಯಿತಿ ಸಮಿತಿ ಉಪಸಭಾಪತಿ ಸಾಗರ ಕಲ್ಯಾಣಶೆಟ್ಟಿ, ದುಧನಿ ನಗರಾಧ್ಯಕ್ಷ ಪ್ರಥಮೇಶ ಮೇತ್ರೆ, ಬಿಡಿಒ ಶಂಕರ ಕವಿತಕೆ, ಡಾ.ಮಂಜುನಾಥ ಪಾಟೀಲ, ಷಣ್ಮುಖ ವಿಭುತೆ, ಇಸ್ಮಾಯಿಲ್ ಮುಜಾವರ್, ಚಿದಾನಂದ ಗುರುವ, ಜಯ ನಾಟಕರ್, ರೇಣುಕಾ ಪವಾರ್ ಇತರರು ಸ್ಥಳಕ್ಕೆ ಧಾವಿಸಿ ಆಸ್ಪತ್ರೆಗೆ ಸಾಗಿಸಲು ನೆರವಾದರು.
ಘಟನೆ ಹಿನ್ನೆಲೆಯಲ್ಲಿ ಜಿಲ್ಲಾ ಪರಿಷತ್ ಶಾಲೆ ಕಟ್ಟಡಗಳ ಸುರಕ್ಷತೆಯನ್ನು ನಿಯಮಿತ ಪರಿಶೀಲಿಸಲಾಗುತ್ತಿದೆಯೇ? ಅಪಾಯಕಾರಿ ಕಟ್ಟಡಗಳ ದುರಸ್ತಿ ಅಥವಾ ಮರು ನಿಮಾರ್ಣಕ್ಕಾಗಿ ಆಡಳಿತ ಇನ್ನೆಷ್ಟು ಅಪಘಾತಗಳಿಗಾಗಿ ಕಾಯಬೇಕು? ಬಬಲಾದ ಶಾಲೆ ಕಟ್ಟಡದ ಸ್ಟ್ರಕ್ಚರಲ್ ಆಡಿಟ್ ನಡೆಸಿ ಅಪಾಯಕಾರಿ ಭಾಗಗಳಲ್ಲಿ ದುರಸ್ತಿ ಅಥವಾ ಹೊಸದಾಗಿ ನಿರ್ಮಿಸಬೇಕು ಎಂಬುದು ಸ್ಥಳಿಯರ ಒತ್ತಾಯವಾಗಿದೆ.