ಬೆಂಗಳೂರಿನ ಜಯಮಹಲ್ ಅರಮನೆಯಲ್ಲಿ ಆರಂಭವಾದ ನಮ್ಮ ಸರಸ್ ಮೇಳ 2026
ಬೆಂಗಳೂರು: ಗ್ರಾಮೀಣ ಭಾರತದ ಕರಕುಶಲ ಕಲೆ, ಸಂಪ್ರದಾಯ ಹಾಗೂ ದೇಶದ ಮೂಲೆಮೂಲೆಯಿಂದ ಬರುವ ಮಹಿಳೆಯರ ಸ್ವಾವಲಂಬನೆಯ ಕಥೆಯನ್ನು ಹತ್ತಿರದಿಂದ ನೋಡುವ ಸುವರ್ಣಾವಕಾಶ ಸಿಲಿಕಾನ್ ಸಿಟಿ ಜನತೆಗೆ ಒಲಿದು ಬಂದಿದೆ.
ಬೆಂಗಳೂರಿನ ಐತಿಹಾಸಿಕ ಜಯಮಹಲ್ ಅರಮನೆ ಆವರಣದಲ್ಲಿ 'ನಮ್ಮ ಸರಸ್ ಮೇಳ-2026' (Namma Saras Mela) ಇಂದಿನಿಂದ (ಸೆಪ್ಟೆಂಬರ್ 19) ಅದ್ಧೂರಿಯಾಗಿ ಆರಂಭಗೊಂಡಿದೆ. ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ (ಸಂಜೀವಿನಿ) ಸಂಯುಕ್ತ ಆಶ್ರಯದಲ್ಲಿ ಈ ರಾಷ್ಟ್ರಮಟ್ಟದ ಬೃಹತ್ ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ಮೇಳದ ವಿಶೇಷತೆಗಳೇನು?
ಹತ್ತು ದಿನಗಳ ಕಾಲ ನಡೆಯುವ ಈ ರಾಷ್ಟ್ರಮಟ್ಟದ ಮೇಳದಲ್ಲಿ ಗ್ರಾಮೀಣ ಮಹಿಳೆಯರ ಪ್ರತಿಭೆ ಅನಾವರಣಗೊಳ್ಳಲಿದೆ. ಇಲ್ಲಿನ ಪ್ರಮುಖ ಆಕರ್ಷಣೆಗಳು ಇತಿಂವೆ.
120ಕ್ಕೂ ಹೆಚ್ಚು ವಿಶಿಷ್ಟ ಸ್ಟಾಲ್‌ಗಳು: ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿರುವ ಮಹಿಳಾ ಸ್ವ-ಸಹಾಯ ಗುಂಪುಗಳ (SHG) ಸದಸ್ಯರು ತಮ್ಮ ಕೈಯಿಂದ ತಯಾರಿಸಿದ ನೈಸರ್ಗಿಕ, ಸಾಂಪ್ರದಾಯಿಕ ಹಾಗೂ ಆಕರ್ಷಕ ಉತ್ಪನ್ನಗಳನ್ನು ಇಲ್ಲಿ ನೇರವಾಗಿ ಮಾರಾಟ ಮಾಡಲಿದ್ದಾರೆ.
ರುಚಿಕರ 30 ಲೈವ್ ಆಹಾರ ಮಳಿಗೆಗಳು: ವಿವಿಧ ಪ್ರಾದೇಶಿಕ ಭಕ್ಷ್ಯಗಳು ಮತ್ತು ಬಾಯಲ್ಲಿ ನೀರೂರಿಸುವ ಸಾಂಪ್ರದಾಯಿಕ ಪಾಕಪದ್ಧತಿಗಳನ್ನು ಸವಿಯಲು 30ಕ್ಕೂ ಹೆಚ್ಚು ಲೈವ್ ಫುಡ್ ಸ್ಟಾಲ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.
ಮಹಿಳಾ ಸಬಲೀಕರಣಕ್ಕೆ ದೊಡ್ಡ ವೇದಿಕೆ
ಗ್ರಾಮೀಣ ಭಾಗದ ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸುವ ಮತ್ತು ಅವರ ಕೌಶಲ್ಯಕ್ಕೆ ಸೂಕ್ತ ಮಾರುಕಟ್ಟೆ ಒದಗಿಸುವ ಸದುದ್ದೇಶದಿಂದ ಈ ಮೇಳವನ್ನು ಆಯೋಜಿಸಲಾಗಿದೆ. ನಿಮ್ಮ ಒಂದು ಭೇಟಿ ಮತ್ತು ಇಲ್ಲಿಂದ ವಸ್ತುಗಳನ್ನು ಖರೀದಿಸುವುದು ಸಾವಿರಾರು ಮಹಿಳಾ ಉದ್ಯಮಿಗಳಿಗೆ ದೊಡ್ಡ ಶಕ್ತಿ ತುಂಬಲಿದೆ.
ಬನ್ನಿ! ಸ್ವ-ಸಹಾಯ ಗುಂಪುಗಳ ಮಹಿಳೆಯರ ಕೈಚಳಕ ಹಾಗೂ ಕೌಶಲ್ಯದ ಪರಂಪರಾಗತ ಉತ್ಪನ್ನಗಳೊಂದಿಗೆ ಗ್ರಾಮೀಣ ಭಾರತದ ಸೃಜನಶೀಲತೆಯನ್ನು ಸಂಭ್ರಮಿಸೋಣ, ಎಂದು ಆಯೋಜಕರು ಎಲ್ಲರಿಗೂ ಪ್ರೀತಿಯ ಸ್ವಾಗತ ಕೋರಿದ್ದಾರೆ.
ಮೇಳದ ಪ್ರಮುಖ ವಿವರಗಳು:
ದಿನಾಂಕ: ಸೆಪ್ಟೆಂಬರ್ 19 ರಿಂದ ಸೆಪ್ಟೆಂಬರ್ 27 ರವರೆಗೆ (10 ದಿನಗಳು)
ಸಮಯ: ಪ್ರತಿದಿನ ಬೆಳಿಗ್ಗೆ 10:00 ಗಂಟೆಯಿಂದ ರಾತ್ರಿ 9:00 ಗಂಟೆಯವರೆಗೆ
ಸ್ಥಳ: ಜಯಮಹಲ್ ಪ್ಯಾಲೇಸ್ ಆವರಣ, ಜಯಮಹಲ್ ಮುಖ್ಯ ರಸ್ತೆ, ಬೆಂಗಳೂರು
ಕುಟುಂಬ ಸಮೇತ ಭೇಟಿ ನೀಡಿ, ಗ್ರಾಮೀಣ ಮಹಿಳೆಯರ ಕೈಚಳಕದ ಕಲೆಗಳನ್ನು ಕಣ್ತುಂಬಿಕೊಳ್ಳಲು ಮತ್ತು ದೇಶಿ ಉತ್ಪನ್ನಗಳನ್ನು ಪ್ರೋತ್ಸಾಹಿಸಲು ಇದುವೇ ಅತ್ಯುತ್ತಮ ಸಮಯ. ಇಂದೇ ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಜಯಮಹಲ್ ಅರಮನೆಗೆ ಭೇಟಿ ನೀಡಿ, ಸರಸ್ ಮೇಳವನ್ನು ಸಕ್ಸಸ್ಫೂಲ್ ಮಾಡಿ.