ಬೆಂಗಳೂರು: ರಾಜ್ಯದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇವೆ. ಕಠಿಣ ಕಾನೂನುಗಳಿದ್ದರೂ ಕಾಮುಕರ ಅಟ್ಟಹಾಸಕ್ಕೆ ಕಡಿವಾಣ ಬೀಳುತ್ತಿಲ್ಲ. ರಾಜ್ಯದಲ್ಲಿ ಪ್ರತಿನಿತ್ಯ ಸರಾಸರಿ 12 ಪೋಕ್ಸೋ ಪ್ರಕರಣ ದಾಖಲಾಗುತ್ತಿರುವ ವಿಚಾರ ಆತಂಕ ಮೂಡಿಸಿದೆ.
ಮಕ್ಕಳ ರಕ್ಷಣೆಗಾಗಿ ಕಠಿಣ ಕಾನೂನು, ಜಾಗೃತಿ ಕಾರ್ಯಕ್ರಮ ನಡೆಯುತ್ತಿದ್ದದರೂ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಬೀಳುತ್ತಿಲ್ಲ. ಪರಿಚಯಸ್ಥರು, ಸಂಬಂಧಿಕರು ಹಾಗೂ ನೆರೆಹೊರೆಯವರಿಂದಲೇ ದೌರ್ಜನ್ಯ ನಡೆಯುತ್ತಿರುವುದು ಸಾರ್ವಜನಿಕ ವಲಯದಲ್ಲಿ ಕಳವಳಕ್ಕೆ ಕಾರಣವಾಗಿದೆ.
ಕೇವಲ ಮೂರೂವರೆ ವರ್ಷಗಳ ಅಂಕಿ-ಅಂಶಗಳನ್ನು ಗಮನಿಸಿದರೆ ಸಮಸ್ಯೆಯ ಗಂಭೀರತೆ ತಿಳಿಯುತ್ತದೆ. 2023ರಲ್ಲಿ 3,902 ಕೇಸ್ಗಳ, 2024ರಲ್ಲಿ 4,078 ಪ್ರಕರಣ, 2025ರಲ್ಲಿ 4,324 ಪ್ರಕರಣ ಹಾಗೂ 2026ರ ಜುಲೈ ವರೆಗೆ 2,936 ಪ್ರಕರಣ ದಾಖಲಾಗಿವೆ. ಈ ಅಂಕಿ-ಅಂಶಗಳ ಪ್ರಕಾರ, ವರ್ಷದಿಂದ ವರ್ಷಕ್ಕೆ ಶೇ.5ರಿಂದ 6 ಪ್ರಕರಣಗಳು ಹೊಸದಾಗಿ ದಾಖಲಾಗುತ್ತಿವೆ.
ಪ್ರಭಾವಿಗಳ ಬೆದರಿಕೆ ಹಾಗೂ ಕುಟುಂಬದ ಘನತೆ-ಗೌರವಕ್ಕೆ ಅಂಜುವ ಅನೇಕ ಗ್ರಾಮೀಣ ಪ್ರದೇಶದ ಪಾಲಕರು, ತಮ್ಮ ಮಕ್ಕಳ ಮೇಲೆ ದೌರ್ಜನ್ಯಗಳಾದರೂ ಠಾಣೆ ಮೆಟ್ಟಿಲೇರುತ್ತಿಲ್ಲ. ರಾಜಿ-ಪಂಚಾಯಿತಿ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಮಕ್ಕಳು ಸಹ ತಮ್ಮ ಮೇಲಾಗುತ್ತಿರುವ ದೌರ್ಜನ್ಯಗಳನ್ನು ಪಾಲಕರ ಬಳಿ ಮುಕ್ತವಾಗಿ ಹೇಳಿಕೊಳ್ಳಲು ಭಯ ಪಡುತ್ತಿದ್ದಾರೆ. ಹೀಗಾಗಿ ಅನೇಕ ಪ್ರಕರಣಗಳು ಬೆಳಕಿಗೆ ಬರುವುದೇ ಇಲ್ಲ ಎಂದು ಅಧಿಕಾರಿಗಳೇ ಮಾಹಿತಿ ನೀಡುತ್ತಾರೆ.
ಮಕ್ಕಳು ದಿನದ ಬಹುಪಾಲು ಸಮಯವನ್ನು ಶಾಲೆಗಳಲ್ಲಿ ಕಳೆಯುತ್ತಾರೆ. ಹೀಗಾಗಿ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಬೇಕು. ಶಿಕ್ಷಕರು, ಶಾಲಾ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗೆ ಮಕ್ಕಳ ರಕ್ಷಣೆಯ ಕುರಿತು ಸೂಕ್ತ ತರಬೇತಿ ನೀಡಬೇಕು. ಸಮಸ್ಯೆಗಳನ್ನು ಮಕ್ಕಳು ನಿರ್ಭೀತಿಯಿಂದ ಹೇಳಿಕೊಳ್ಳಲು ವಿಶ್ವಾಸಾರ್ಹ ಶಿಕ್ಷಕರು ಮತ್ತು ದೂರು ಸಲ್ಲಿಸುವ ವ್ಯವಸ್ಥೆ ಇರಬೇಕು. ಮಕ್ಕಳೊಂದಿಗೆ ಸಂವಹನ ನಡೆಸುವ ಪ್ರತಿಯೊಂದು ಹಂತದಲ್ಲೂ ಅವರ ಸುರಕ್ಷತೆ ಮತ್ತು ಗೌಪ್ಯತೆಗೆ ಆದ್ಯತೆ ನೀಡಬೇಕು.
ಮಕ್ಕಳಿಗೆ ವಯಸ್ಸಿಗೆ ತಕ್ಕಂತೆ ಸುರಕ್ಷತೆಯ ಅರಿವು ಮೂಡಿಸಬೇಕು.
ದೌರ್ಜನ್ಯದ ಮಾಹಿತಿ ಬಂದ ಕೂಡಲೇ ಕಾನೂನುಬದ್ಧವಾಗಿ ದೂರು ದಾಖಲಿಸಬೇಕು.
ಪ್ರಕರಣಗಳ ತನಿಖೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು.
ಮಕ್ಕಳ ಸ್ನೇಹಿ ನ್ಯಾಯಾಲಯಗಳ ಕಾರ್ಯಕ್ಷಮತೆ ಹೆಚ್ಚಿಸಬೇಕು.
ಸಂತ್ರಸ್ತ ಮಕ್ಕಳಿಗೆ ಮಾನಸಿಕ, ಸಾಮಾಜಿಕ ಹಾಗೂ ಕಾನೂನು ನೆರವು ಒದಗಿಸಬೇಕು.
ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು.
ಪೋಕ್ಸೋ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಬಹಳ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಸಂತ್ರಸ್ತೆಗೆ ನ್ಯಾಯ ಕೊಡಿಸುವಲ್ಲಿ ವ್ಯವಸ್ಥೆಯು ಸಂವೇದನಶೀಲತೆಯಿಂದ ಕಾರ್ಯನಿರ್ವಹಿಸುವುದು ಸೂಕ್ತ.- ಶಶಿಧರ್ ಕೋಸಂಬೆ, ನಿಕಟ ಪೂರ್ವ ಅಧ್ಯಕ್ಷ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ