12 dilapidated commercial shops demolished
ಚಿಂತಾಮಣಿ : ನಗರದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಸರ್ಕಾರಿ ಸ್ವಾಮ್ಯದ 12 ವಾಣಿಜ್ಯ ಮಳಿಗೆಗಳನ್ನು ಜಿಲ್ಲಾಡಳಿತ, ನಗರಸಭೆಯ ಜಂಟಿ ಕಾರ್ಯಾಚರಣೆ ಮೂಲಕ ಭಾನುವಾರ ತೆರವುಗೊಳಿಸಲಾಗಿದೆ ಎಂದು ಪೌರಾಯುಕ್ತ ಜಿ.ಎನ್.ಚಲಪತಿ ಹೇಳಿದರು.
ಸುಮಾರು 80 ವರ್ಷ ಹಳೆಯದಾದ ಈ ಕಟ್ಟಡಗಳು ವಾಸಕ್ಕೆ ಹಾಗೂ ವಾಣಿಜ್ಯ ಬಳಕೆಗೆ ಯೋಗ್ಯವಾಗಿಲ್ಲ ಎಂದು ಲೋಕೋಪಯೋಗಿ ಇಲಾಖೆ ಫಿಟ್ನೆಸ್ ಸರ್ಟಿಫಿಕೇಟ್ ನೀಡಿದ್ದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಈ ಜಾಗವನ್ನು ಸಾರ್ವಜನಿಕರು ಅಪಾರ್ಟ್ ಮಾಡಿಕೊಂಡು, ನಿಯಮಬಾಹಿರವಾಗಿ ಇತರರಿಗೆ ಸಬ್ಲೀಸ್ಗೆ ನೀಡಿದ್ದರು ಎಂದು ಸುದ್ದಿಗಾರರಿಗೆ ತಿಳಿಸಿದರು.
ತಿಂಗಳಿಗೆ 7ರಿಂದ 17 ಸಾವಿರ ಬಾಡಿಗೆ!: ಸೆಸನ್ ಟ್ಯಾಕ್ಸ್ ವ್ಯಾಪ್ತಿಯಲ್ಲಿದ್ದ 12 ಅಂಗಡಿಗಳನ್ನು ಇಬ್ಬರು ವ್ಯಕ್ತಿಗಳು ಅನಾಮಧೇಯವಾಗಿ ನಿಯಂತ್ರಿಸುತ್ತಿದ್ದರು. ತಿಂಗಳಿಗೆ 7ರಿಂದ 17 ಸಾವಿರ ರೂಪಾಯಿ ಅತ್ಯಲ್ಪ ಬಾಡಿಗೆ ಪಡೆದು, ನ್ಯಾಯಾಲಯಕ್ಕೆ ಕಡಿಮೆ ಮೊತ್ತ ಪಾವತಿಸುವಂತೆ ವ್ಯವಸ್ಥೆ ಮಾಡಿಕೊಂಡು, ಹಲವು ವರ್ಷಗಳಿಂದ ಕಾನೂನು ಹೋರಾಟದ ನೆಪದಲ್ಲಿ ಸರ್ಕಾರಿ ಆಸ್ತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು. ಇದರಿಂದ ಸರ್ಕಾರಕ್ಕೆ ಭಾರಿ ನಷ್ಟ ಉಂಟಾಗುತ್ತಿತ್ತು. ಹಲವು ಸಂ&ಸಂಸ್ಥೆಗಳಿಂದ ಒತ್ತುವರಿ ತೆರವುಗೊಳಿಸುವಂತೆ ಸತತವಾಗಿ ಒತ್ತಾಯಿಸಿ ಮನವಿ ಮಾಡಿದ್ದವು ಎಂದು ಜಿ.ಎನ್.ಚಲಪತಿ ತಿಳಿಸಿದರು.
ಈ ಹಿಂದಿನ ನಗರಸಭೆ ಪೌರಾಯುಕ್ತರು ಸೇರಿ ನಾನು ಅಧಿಕಾರ ವಹಿಸಿಕೊಂಡು ದಾಖಲೆಗಳನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೆವು. ನ್ಯಾಯಾಲಯದಲ್ಲಿದ್ದ ಪ್ರಕರಣವನ್ನು ಇತ್ಯರ್ಥಪಡಿಸಿ, ದಾವೆ ವಜಾಗೊಳಿಸಲಾಗಿದೆ. ಈ ಹಿಂದೆ ಲೀಸ್ ಪಡೆದಿದ್ದವರೂ ಈಗ ತೆರವು ಕಾರ್ಯಾಚರಣೆಗೆ ಸಹಕರಿಸಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶದಂತೆ ಕಾರ್ಯಾಚರಣೆ ನಡೆಸಲಾಗಿದೆ. ರಾತ್ರೋರಾತ್ರಿ ಕಟ್ಟಡ ಉರುಳಿಸಲಾಗಿದೆ ಎಂಬ ಆರೋಪ ಸುಳ್ಳು ಎಂದು ಜಿ.ಎನ್.ಚಲಪತಿ ಸ್ಪಷ್ಟಪಡಿಸಿದರು. ತೆರವುಗೊಳಿಸಲಾದ ಜಾಗಕ್ಕೆ ಬೌಂಡರಿ ಹಾಗೂ ಫೆನ್ಸಿಂಗ್ ಹಾಕಲಾಗುತ್ತಿದ್ದು, ಶಾಸಕರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸಾರ್ವಜನಿಕ ಸೇವೆಗೆ ಬಳಸಿಕೊಳ್ಳಲಾಗುವುದು ಎಂದರು.
ಫುಟ್ಪಾತ್ ವ್ಯಾಪಾರಿಗಳಿಗೆ ಎಚ್ಚರಿಕೆ
ನಗರದ ಪ್ರಮುಖ ರಸ್ತೆಗಳ ವಿಸ್ತರಣೆ ಕಾರ್ಯ ಪ್ರಗತಿಯಲ್ಲಿದ್ದು, ಫುಟ್ಪಾತ್ ಒತ್ತುವರಿ ಮಾಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಪೌರಾಯುಕ್ತರು ಎಚ್ಚರಿಸಿದರು. ಬೆಸ್ಕಾಂನ ಯುಜಿ ಕೇಬಲ್ ಅಳವಡಿಕೆ ವಿಳಂಬದಿಂದಾಗಿ ಫುಟ್ಪಾತ್ ಕಾಮಗಾರಿ ತಡವಾಗಿತ್ತು. ಈಗ ಶಾಸಕರಿಂದ ಕ್ಲಿಯರೆನ್ಸ್ ಸಿಕ್ಕಿದ್ದು, ಸೋಮವಾರದಿಂದಲೇ ಕೇಬಲ್ ಕಾಮಗಾರಿ ಮುಗಿಸಿ ಫುಟ್ಪಾತ್ ನಿರ್ಮಾಣ ಪೂರ್ಣಗೊಳಿಸಲಾಗುವುದು. ಬೆಂಗಳೂರಿನಲ್ಲಿ ಕೈಗೊಂಡಿರುವ ಒತ್ತುವರಿ ಮುಕ್ತ ಮಾದರಿಯನ್ನೇ ಇಲ್ಲೂ ಜಾರಿ ಗೊಳಿಸಲಾಗುವುದು. ಸುಪ್ರೀಂಕೋರ್ಟ್ ಆದೇಶದಂತೆ ಫುಟ್ಪಾತ್ ಸಾರ್ವಜನಿಕರ ಸಂಚಾರಕ್ಕೆ ಮಾತ್ರ ಮೀಸಲು. ನಗರದ ಬಾಗೇಪಲ್ಲಿ ಸರ್ಕಲ್ನಲ್ಲಿ ಫುಟ್ಪಾತ್ ಒತ್ತುವರಿಯಿಂದಾಗಿ ಪೊಲೀಸ್ ಪೇದೆಯೊಬ್ಬರು ಮೃತಪಟ್ಟ ಟನೆಯನ್ನು ಸಾರ್ವಜನಿಕರು ಮರೆಯಬಾರದು. ಇನ್ನು ಮುಂದೆ ಒತ್ತುವರಿ ಕಂಡುಬಂದರೆ ಯಾವುದೇ ಮುಲಾಜಿಲ್ಲದೆ ಸಾಮಗ್ರಿಗಳನ್ನು ಗುಜರಿಗೆ ಹಾಕಲಾಗುವುದು, ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.
ನಗರದ ರಸ್ತೆ ಕಾಮಗಾರಿ ಸ್ವಲ್ಪ ವಿಳಂಬ
ನಗರದ ಪ್ರಮುಖ ರಸ್ತೆಗಳ ಕಾಮಗಾರಿಗಳು ಕೆಲವು ವಿಳಂಬವಾಗಿವೆ. ಕೆಲವು ಮುಕ್ತಾಯದ ಹಂತಕ್ಕೆ ತಲುಪಿವೆ. ಬಾಗೇಪಲ್ಲಿ ವೃತ್ತ ಮತ್ತು ಕೋಲಾರ ವೃತ್ತದ ಕಾಮಗಾರಿಗಳು ಈಗಾಗಲೇ ಚಾಲ್ತಿಯಲ್ಲಿದ್ದು, ಆಜಾದ್ ಚೌಕ್ ಕಾಮಗಾರಿ ಮುಂದಿನ 15 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಜಾಗತಿಕ ಮಟ್ಟದಲ್ಲಿ ನಡೆದ ಯುದ್ಧಗಳ ಕಾರಣದಿಂದಾಗಿ ಪೆಟ್ರೋಲಿಯಂ ಉತ್ಪನ್ನವಾದ ಬಿಟುಮಿನ್ (ಡಾಂಬರು) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ಜಲ್ಲಿ ಮತ್ತು ಡಾಂಬರು ಸಿಗದೆ ಕಾಮಗಾರಿ ಕೊಂಚ ತಡವಾಗಿದೆಯೇ ಹೊರತು ಬೇರೆ ಯಾವುದೇ ಕಾರಣವಿಲ್ಲ. ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಇನ್ನು 1 ರಿಂದ 2 ತಿಂಗಳ ಒಳಗಾಗಿ ಬಾಕಿ ಉಳಿದಿರುವ ರಸ್ತೆ ಕಾಮಗಾರಿಗಳನ್ನು ಆರಂಭಿಸಿ ಮುಗಿಸಲಾಗುವುದು ಎಂದು ಪೌರಾಯಕ್ತರು ಹೇಳಿದರು.