Ayushman Bharath pradhan Manthri jan arogya yojana
- * ಕೃತಕ ಬುದ್ದಿಮತ್ತೆ (ಎ.ಐ) ತಂತ್ರಜ್ಞಾನ ಬಳಸಿ ಚಿಕಿತ್ಸೆಯ ನಕಲಿ ದಾಖಲೆಗಳ ಪತ್ತೆ
- * ಸುಳ್ಳು ದಾಖಲೆ ನೀಡಿರುವ ಆಸ್ಪತ್ರೆಗಳು ಕಪ್ಪು ಪಟ್ಟಿಗೆ ಸೇರ್ಪಡೆ
ಬೆಂಗಳೂರು: ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿ ಪಿಎಂಜೆವೈ) ಆರಂಭಗೊಂಡು ಏಳು ವರ್ಷಗಳು ಕಳೆದಿದ್ದು, ಈವರೆಗೂ 1.8 ಲಕ್ಷ ಕೋಟಿ ರೂ. ವೆಚ್ಚದಲ್ಲಿ 12 ಕೋಟಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುನಿಲ್ ಕುಮಾರ್ ಬರ್ನ್ವಾಲ್ ಹೇಳಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ದೇಶದ 60 ಕೋಟಿ ಜನರು ಯೋಜನೆ ವ್ಯಾಪ್ತಿಗೆ ಒಳಪಟ್ಟಿದ್ದು, 43 ಕೋಟಿಗೂ ಹೆಚ್ಚು ಜನರು ಆಯುಷ್ಮಾನ್ ಭಾರತ್ ಗುರುತಿನ ಚೀಟಿ ಪಡೆದುಕೊಂಡಿದ್ದಾರೆ. 35 ಸಾವಿರಕ್ಕೂ ಅಧಿಕ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂ. ವರೆಗೆ ನಗದು ರಹಿತ ದ್ವಿತೀಯ ಮತ್ತು ತೃತೀಯ ಹಂತದ ಚಿಕಿತ್ಸೆಯ ರೂಪದಲ್ಲಿ ಆರೋಗ್ಯ ವಿಮಾ ರಕ್ಷಣೆ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಯೋಜನೆಯಡಿ ನಿತ್ಯ 40 ಸಾವಿರ ಕ್ಲೇಮ್‌ಗಳನ್ನು ವಿಲೇವಾರಿ ಮಾಡುವುದು ಸವಾಲಾಗಿದೆ. ಈ ಪೈಕಿ ಶೇ. 30 ಡಯಾಲಿಸಿಸ್ ಮತ್ತು ಕ್ಯಾ ಕ್ಯಾಟರಾಕ್ಟ್ (ಕಣ್ಣಿನ ಪೊರೆ ಚಿಕಿತ್ಸೆ) ಸಂಬಂಧಿಸಿದಾಗಿದೆ. ವೈದ್ಯರು ಮತ್ತು ಅಧಿಕಾರಿಗಳು ಪ್ರತಿಯೊಂದು ದಾಖಲೆಯನ್ನು ಪರಿಶೀಲಿಸಬೇಕಾಗುತ್ತದೆ. ಇದರಿಂದ 15 ರಿಂದ 20 ದಿನ ಸಮಯ ಬೇಕಾಗುತ್ತದೆ ಎಂದು ವಿವರಿಸಿದರು.
ಎಐ ತಂತ್ರಜ್ಞಾನ ಅಳವಡಿಕೆ:
ವೈದ್ಯಕೀಯ ಕ್ಷೇತ್ರದಲ್ಲಿ ಎ.ಐ ತಂತ್ರಜ್ಞಾನ ಅಳವಡಿಕೆಯಿಂದ ರೋಗಿಯ ಕಾಯಿಲೆಯನ್ನು ಪತ್ತೆ ಹಾಗೂ ಚಿಕಿತ್ಸೆಗೆ ಅನುಕೂಲವಾಗಲಿದೆ. ಇದರಿಂದ ಹಣ ಹಾಗೂ ಸಮಯ ಉಳಿತಾಯದ ಜತೆಗೆ ರೋಗಿ ಆರೋಗ್ಯ ಸುಧಾರಣೆಗೂ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ವೈದ್ಯಕೀಯ ದಾಖಲೆಗಳ ಡಿಜಿಟಲೀಕರಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನಕಲಿ ದಾಖಲೆಗಳು ಪತ್ತೆ:
ಎ.ಐ ತಂತ್ರಜ್ಞಾನ ಮತ್ತು ಡೀಪ್ ಫೇಕ್ ಬಳಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ವಿಮೆ ಹಣ ಕ್ಲೇಮ್ ಮಾಡಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಎಐ ತಂತ್ರಜ್ಞಾನವನ್ನು ಉಪಯೋಗದ ಜತೆಗೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆಸ್ಪತ್ರೆಗಳು ಕಳುಹಿಸಿರುವ ವೈದ್ಯಕೀಯ ದಾಖಲೆಗಳನ್ನು ಕೃತಕ ಬುದ್ದಿಮತ್ತೆ (ಎ.ಐ) ತಂತ್ರಜ್ಞಾನ ಮೂಲಕ ಪರಿಶೀಲನೆ ನಡೆಸಿದಾಗ, ನಕಲಿ ದಾಖಲೆಗಳು ಪತ್ತೆಯಾಗಿವೆ. ರೋಗಿಯ ಕಾಯಿಲೆ ಬಗ್ಗೆ ಸುಳ್ಳು ದಾಖಲೆ ನೀಡಿರುವ ಆಸ್ಪತ್ರೆಗಳನ್ನು ಕಪ್ಪು ಪಟ್ಟಿಗೆ ಸೇರಿಸುವುದು, ದಂಡ ವಿಧಿಸುವ ಮೂಲಕ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಸುಮಾರು 630 ಕೋಟಿ ಹಣ ದುರುಪಯೋಗ ಆಗುವುದನ್ನು ತಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ಗೋಷ್ಟಿಯಲ್ಲಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಜಂಟಿ ಕಾರ್ಯದರ್ಶಿ ಜ್ಯೋತಿ ಯಾದವ್, ವ್ಯವಸ್ಥಾಪಕ ನಿರ್ದೇಶಕ ಡಾ.ಕಿರಣ್ ಗೋಪಾಲ್ ವಾಸ್ಕಾ, ಇಂಡಿಯಾ ಎಐ ಮಿಷನ್ ಜಂಟಿ ನಿರ್ದೇಶಕಿ ಸಿಖಾ, ಐಐಎಸ್ಸಿ ಪ್ರಾಧ್ಯಾಪಕ ಪ್ರೊ.ಫಣೀಂದ್ರ ಇದ್ದರು.