11,41,657 ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ 
ರಾಜ್ಯ

ರಾಜ್ಯದಲ್ಲಿ 11.41 ಲಕ್ಷ ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ ವಿತರಣೆ-LPG

ಬೆಂಗಳೂರು: ಮಧ್ಯಪ್ರಾಚೀನ ಸಂಘರ್ಷ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆಯಾಗದಂತೆ ಕ್ರಮ ಕೈಗೊಳ್ಳುತ್ತಿರುವ ಆಹಾರ ಇಲಾಖೆ, ಇದುವರೆಗೆ 11,41,657 ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಹಾಗೂ 20,941 ವಾಣಿಜ್ಯ ಬಳಕೆಯ ಸಿಲಿಂಡರ್ ವಿತರಿಸಿದೆ.
ಜೊತೆಗೆ, ಆಟೋ ಎಲ್ಪಿಜಿ ವಿತರಣೆಯಲ್ಲಿ ತೊಂದರೆಯಾಗದಂತೆ ಇಲಾಖೆ ಕ್ರಮವಹಿಸಿದೆ. ಈ ಹಿನ್ನೆಲೆಯಲ್ಲಿ ಗೃಹ ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್, ಆಟೋ ಎಲ್ಪಿಜಿ ಸರಬರಾಜು ಮತ್ತು ವಿತರಣೆಯಲ್ಲಿ ಹೆಚ್ಚಳವಾಗಿದೆ. ಸಾರ್ವಜನಿಕರ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಆಟೋ ಚಾಲಕರ ಜೀವನ ನಿರ್ವಹಣೆಗೆ ತೊಂದರೆಯಾಗದಂತೆ ಇಲಾಖೆ, ಆಟೋ ಎಲ್ಪಿಜಿ ಮತ್ತು ವಾಣಿಜ್ಯ ಸಿಲಿಂಡರ್‌ಗಳ ಸರಬರಾಜು ಹೆಚ್ಚಿಸಿದೆ. ಕಳೆದ 3 ದಿನದಲ್ಲಿ ಕೇಂದ್ರ ಸರ್ಕಾರದ ನಿರ್ದೇಶನ ಅನ್ವಯ ರಾಜ್ಯದಲ್ಲಿ ತೈಲ ಕಂಪನಿಗಳು, ಶೇ.20 ವಿತರಣಾ ಮತ್ತು ಸರಬರಾಜು ಹೆಚ್ಚಳವಾಗಿದೆ.
ರಾಜ್ಯದಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿ. (ಐಒಸಿಎಲ್) 62.27 ಲಕ್ಷ, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ.(ಎಚ್‌ಪಿಸಿಎಲ್) 48.83 ಲಕ್ಷ ಹಾಗೂ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ.( ಬಿಪಿಸಿಎಲ್) 35.59 ಲಕ್ಷ ಸೇರಿ ಒಟ್ಟು 1.46,07900 ಗ್ರಾಹಕರು ಎಲ್ಪಿಜಿ ಸಂಪರ್ಕ ಹೊಂದಿದ್ದಾರೆ.
ಉಜ್ವಲಾ ಯೋಜನೆಯಡಿ ಐಒಸಿಎಲ್‌ನ 13,93,748, ಬಿಪಿಸಿಎಲ್‌ನ 7,40,897 ಹಾಗೂ ಎಚ್‌ಪಿಸಿಎಲ್‌ನ 10,11,042 ಸೇರಿ ಒಟ್ಟು 31,45,687 ಗ್ರಾಹಕರಿದ್ದಾರೆ. 600ಕ್ಕೂ ಅಧಿಕ ಗ್ಯಾಸ್ ಏಜೆನ್ಸಿಗಳಿದ್ದು, ಗ್ರಾಹಕರಿಗೆ ಎಲ್ಪಿಜಿ ಸಿಲಿಂಡರ್ ವಿತರಿಸುತ್ತಿವೆ.
514 ಸಿಲಿಂಡರ್ ಜಪ್ತಿ:
ಕಾಳಸಂತೆಯಲ್ಲಿ ದುಪ್ಪಟ್ಟು ಬೆಲೆಗೆ ಎಲ್ಪಿಜಿ ಸಿಲಿಂಡರ್ ಮಾರಾಟ ಮಾಡುತ್ತಿರುವವರ ವಿರುದ್ಧ ಇಲಾಖೆ ಕಾರ್ಯಾಚರಣೆ ನಡೆಸುತ್ತಿದ್ದು, ಇದುವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ 5 ಎಫ್​​​ಐಆರ್ ಮತ್ತು 514 ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದೆ. ರಾಜ್ಯದ ಇತರ ಜಿಲ್ಲೆಗಳಗಿಂತ ಬೆಂಗಳೂರು ನಗರದಲ್ಲೇ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ 221, ಬೆಂ.ಗ್ರಾಮಾಂತರ 209 ಎಲ್ಪಿಜಿ ಸಿಲಿಂಡರ್ ಜಪ್ತಿ ಮಾಡಲಾಗಿದೆ.
ಯಾದಗಿರಿ 46, ದಾವಣಗೆರೆ 13, ಬೆಳಗಾವಿ 12, ರಾಯಚೂರು 4, ಚಿಕ್ಕಮಗಳೂರು 3, ಧಾರವಾಡ 2, ಶಿವಮೊಗ್ಗ 3, ಕೋಲಾರ 1 ಸಿಲಿಂಡರ್ ವಶಪಡಿಸಿಕೊಳ್ಳಲಾಗಿದೆ. ದಾವಣಗೆರೆ ಎಪಿಎಂಸಿ, ಬೆಂಗಳೂರಿನ ಪೀಣ್ಯ, ಚಿಕ್ಕಜಾಲ, ಕೆಂಗೇರಿ, ಕೋಲಾರದ ಕೆಜಿಎ್ನಲ್ಲಿ ಎಫ್​​​ಐಆರ್ ದಾಖಲಿಸಿದೆ. ಅನಧಿಕೃತವಾಗಿ ಗ್ಯಾಸ್ ಸಿಲಿಂಡರ್‌ಗಳ ಅಕ್ರಮ ದಾಸ್ತನು, ಸಾಗಾಣಿಕೆ,ರಿಫೀಲಿಂಗ್ ಮೇಲೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. ಅನಧಿಕೃತವಾಗಿ ಗೃಹ ಬಳಕೆ ಸಿಲಿಂಡರ್‌ಗಳನ್ನು ವಾಣಿಜ್ಯ ಬಳಕೆಗೆ ಉಪಯೋಗಿಸುತ್ತಿರುವುದು ಕಂಡುಬಂದಿದ್ದು, ಈ ವೇಳೆ ಕ್ರಿಮಿನಲ್ ಕೇಸ್‌ಗಳಲ್ಲಿ ಎಫ್​​​ಎಆರ್ ದಾಖಲಿಸಲಾಗುತ್ತಿದೆ.
ಸಿಲಿಂಡರ್ ವಿತರಣೆ ವಿವರ
ದಿನಾಂಕ ಅಡುಗೆ ಅನಿಲ ವಾಣಿಜ್ಯ ಸಿಲಿಂಡರ್
ಮಾ.12 3,52,921 5,058
ಮಾ.13 3,86,363 6,371
ಮಾ.14 4,02,373 9,512
ಒಟ್ಟು 11,41,657 20,941
ವಾಣಿಜ್ಯ ಉದ್ದೇಶಕ್ಕೆ ಗೃಹಬಳಕೆ ಸಿಲಿಂಡರ್ ಬಳಸಿದರೆ ಮತ್ತು ಗ್ಯಾಸ್ ಏಜೆನ್ಸಿಗಳು ಅಕ್ರಮವಾಗಿ ರಿಫೀಲಿಂಗ್ ನಡೆಸಿದರೆ ಅಗತ್ಯ ವಸ್ತುಗಳ ಕಾಯ್ದೆ ಅಡಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ವಾಣಿಜ್ಯ ಬಳಕೆಯ ಒಟ್ಟು ಶೇ.20 ಸಿಲಿಂಡರ್‌ಗಳನ್ನು ಆಸ್ಪತ್ರೆ, ಶಾಲಾ. ಶಿಕ್ಷಣ ಸಂಸ್ಥೆಗಳು, ವಿಮಾನ, ರೈಲು, ಬಸ್ ನಿಲ್ದಾಣಗಳ ಕ್ಯಾಂಟಿನ್‌ಗಳಿಗೆ, ಪ್ರಮುಖ ದೇವಸ್ಥಾನಗಳಿಗೆ ಪ್ರಸಾದ ವಿನಿಯೋಗ ಮಾಡಲು ಆದ್ಯತೆ ಮೇರೆಗೆ ವಾಣಿಜ್ಯ ಬಳಕೆಯ ಸಿಲಿಂಡರ್ ವಿತರಿಸಲು ಸೂಚಿಸಲಾಗಿದೆ. ಸರ್ಕಾರಿ ಕಚೇರಿ, ವೃದ್ಧಾಶ್ರಮ, ಖಾಸಗಿ ವಲಯದ ಕಚೇರಿಗಳಿಗೂ ಸಿಲಿಂಡರ್ ವಿತರಣೆಯಲ್ಲಿ ಯಾವುದೇ ತೊಂದರೆಯಾಗಿಲ್ಲ.
- ಕನಗವಲ್ಲಿ, ಆಹಾರ ಇಲಾಖೆಯ ಕಾರ್ಯದರ್ಶಿ.