ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ  
ರಾಜ್ಯ

ಬಿಡಿಎ ಭೂಸ್ವಾಧೀನದಲ್ಲಿ 1.11 ಲಕ್ಷ ಅನಧಿಕೃತ ಮನೆಗಳು

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಸ್ವಾಧೀನಪಡಿಸಿಕೊಂಡಿರುವ ಜಮೀನಿನಲ್ಲಿ 1,11,560 ಅನಧಿಕೃತ ಮನೆಗಳು ಇರುವುದಾಗಿ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ವಿಧಾನಸಭೆಯ ಕಲಾಪದಲ್ಲಿ ಪ್ರತಿಪಕ್ಷದವರ ಗದ್ದಲದ ನಡುವೆಯೇ ಕೃಷ್ಣ ಬೈರೇಗೌಡ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ತಿದ್ದುಪಡಿ) ವಿಧೇಯಕವನ್ನು ಅನುಮೋದನೆಗೆ ಮಂಡಿಸಿದರು. ಸಭಾಧ್ಯಕ್ಷ ಜಿ.ಎಸ್.ಪಾಟೀಲ್ ಧ್ವನಿಮತಕ್ಕೆ ಹಾಕುವ ಮೂಲಕ ವಿಧೇಯಕಕ್ಕೆ ಅನುಮೋದನೆ ದೊರಕಿದೆ ಎಂದು ಘೋಷಿಸಿದರು.
ಇದಕ್ಕೂ ಮೊದಲು ಕೃಷ್ಣ ಬೈರೇಗೌಡ, ಬಿಡಿಎ ಸ್ವಾಧೀನ ಪಡಿಸಿಕೊಂಡಿರುವ ಜಮೀನುಗಳ ಒಳಗಡೆ ಅನಧಿಕೃತವಾಗಿ ಬಡವರು ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಆ ಆಸ್ತಿಗಳಿಗೆ ಸೂಕ್ತ ಖಾತಾ ಮತ್ತು ದಾಖಲೆ ಇಲ್ಲದೆ ವಾರಸುದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನೂ ಸರ್ಕಾರ ಕೂಡ ಅವರನ್ನು ತೆರವು ಮಾಡಲು ಸಾಧ್ಯವಾಗುವುದಿಲ್ಲ. ಆದರಿಂದ ಅವರಿಗೆ ಶಾಶ್ವತ ದಾಖಲೆ ನೀಡುವ ಸಲುವಾಗಿ ಸರ್ಕಾರ ವಿಧಿಸಿದ್ದ ಶುಲ್ಕವನ್ನು ಶೇ.50 ಕಡಿಮೆ ಮಾಡುವ ಸಲುವಾಗಿ ಈ ವಿಧೇಯಕಕ್ಕೆ ತಿದ್ದುಪಡಿ ತರಲಾಗಿದೆ. ಈ ಪ್ರಕಾರ, 20*30 ಚದರಡಿ ಅಳತೆಯ ನಿವೇಶನಕ್ಕೆ ಮಾರ್ಗಸೂಚಿ ಮೌಲ್ಯದ ಶೇ.10 ಶುಲ್ಕದ ಬದಲಿಗೆ ಶೇ.5ಕ್ಕೆ ಇಳಿಸಲಾಗಿದೆ.
ಅದೇ ರೀತಿಯಾಗಿ 20*30 ಚದರಡಿಕ್ಕಿಂತ ಹೆಚ್ಚು ಮತ್ತು 30*40 ರವರೆಗೆ ಇರುವ ಶೇ.25 ಶುಲ್ಕದಿಂದ ಶೇ.12.5ಕ್ಕೆ ಕಡಿಮೆ ಮಾಡಲಾಗಿದೆ. 30*40ಕ್ಕಿಂತ ಹೆಚ್ಚು ಮತ್ತು 40*60 ರವರೆಗಿನ ಶೇ.40 ಶುಲ್ಕವನ್ನು ಶೇ.20ಕ್ಕೆ ಹಾಗೂ 40*60 ಕ್ಕಿಂತ ಹೆಚ್ಚು ಮತ್ತು 50*80 ಚದರಡಿ ಸೈಟಿಗೆ ವಿಧಿಸಿದ್ದ ಶೇ.50 ರಿಂದ ಶೇ.25ಕ್ಕೆ ಇಳಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.
ಇದಕ್ಕೆ ಅಭಿನಂದನೆ ಸಲ್ಲಿಸಿದ ಶಾಸಕ ಎಸ್.ಟಿ.ಸೋಮಶೇಖರ್, 20*30 ಮತ್ತು 30*40 ಚದರಡಿ ಅಳತೆಯ ನಿವೇಶನಗಳಿಗೆ ವಿಧಿಸಿರುವ ಮೊತ್ತವನ್ನು ಮತ್ತಷ್ಟು ಕಡಿಮೆ ಮಾಡಿದರೆ ಜನಸಾಮಾನ್ಯರಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು. ಸರ್ಕಾರ ಭೂಸ್ವಾಧೀನಕ್ಕೆ ಮಾಡಿರುವ ಖರ್ಚಿನಲ್ಲಿ ಅರ್ಧದಷ್ಟು ಹಣ ಕೂಡ ಬರುವುದಿಲ್ಲ. ಪ್ರಾಯೋಗಿಕವಾಗಿ ಮೊದಲು ಜಾರಿ ಮಾಡೋಣ, ನಂತರದಲ್ಲಿ ತಮ್ಮ ಸಲಹೆಯನ್ನು ಮುಖ್ಯಮಂತ್ರಿ ಜತೆಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಕೃಷ್ಣ ಬೈರೇಗೌಡ ಭರವಸೆ ನೀಡಿದರು.