- ವಿದ್ಯುತ್ ಅವಡದಿಂದ ಬಾಲಕ ಮೃತಪಟ್ಟ ಪ್ರಕರಣ
ಬೆಂಗಳೂರು: ವಿದ್ಯುತ್ ಕಂಬದಲ್ಲಿ ಸಿಲುಕಿದ್ದ ಗಾಳಿಪಟ ಬಿಡಿಸುವಾಗ ಹೈಟೆನ್ಷನ್ ವಿದ್ಯುತ್ ತಂತಿ ತಾಕಿ ಮೃತಪಟ್ಟಿದ್ದ 11 ವರ್ಷದ ಬಾಲಕನ ಪಾಲಕರಿಗೆ 10.52 ಲಕ್ಷ ರೂಪಾಯಿ ಪರಿಹಾರ ನೀಡಲು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಗೆ (ಹೆಸ್ಕಾಂ) ಹೈಕೋರ್ಟ್ ಆದೇಶಿಸಿದೆ.
ಬಾಲಕನ ಸ್ವಂತ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ ಎಂಬ ಹೆಸ್ಕಾಂನ ವಾದವನ್ನು ಪರಿಗಣಿಸಿ ಪರಿಹಾರ ನೀಡಲು ನಿರಾಕರಿಸಿದ್ದ ಲೋಕ ಅದಾಲತ್ನ ಆದೇಶವನ್ನು ಪ್ರಶ್ನಿಸಿ ಬಾಲಕನ ಪಾಲಕರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ಅರ್ಜಿಯನ್ನು ಹೈಕೋರ್ಟ್ನ ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಲಾಗಿತ್ತು.
ವಿದ್ಯುತ್ ಉತ್ಪಾದನೆ, ಪ್ರಸರಣದ ಜವಾಬ್ದಾರಿ ಹೊಂದಿರುವ ಸಂಸ್ಥೆಗಳು ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಎಚ್ಚರ ವಹಿಸಬೇಕು.ವಿದ್ಯುತ್ ಕಂಬಗಳ ಸ್ಥಾಪನೆ ಮತ್ತು ಹೈಟೆನ್ಷನ್ ತಂತಿಗಳನ್ನು ಎಳೆಯುವುದರಿಂದ ವಿದ್ಯುತ್ ಸರಬರಾಜು ಕಂಪನಿಯ ಹೊಣೆಗಾರಿಕೆ ಮುಗಿಯುವುದಿಲ್ಲ. ಅದರ ಸುತ್ತಲೂ ಜನರು ಅಪಾಯಕ್ಕೆ ಸಿಲುಕದಂತೆ ಬೇಲಿ ಹಾಕುವುದು ಸೇರಿ ಇತರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಪಾಯಕಾರಿ ವ್ಯವಸ್ಥೆಗಳ ಮೇಲೆ ನಿಯಂತ್ರಣ ಹೊಂದಿರುವ ವಿದ್ಯುತ್ ಕಂಪನಿಗಳು ಈ ಬಗ್ಗೆ ಗಂಭೀರವಾಗಿಬೇಕು ಎಂದು ನ್ಯಾಯಪೀಠ ವಿವರಿಸಿದ್ದು, ಪರಿಹಾರ ಪಾವತಿಸಲು ಆದೇಶಿಸಿದೆ.
ಬೆಳಗಾವಿಯ ಮಾರಿಹಾಳ ನಿವಾಸಿಗಳಾದ ಗುಡದಪ್ಪ ರುದ್ರಪ್ಪ ತಳವಾರ ಮತ್ತು ರೇಣುಕಾ ದಂಪತಿಯ 11 ವರ್ಷದ ಪುತ್ರ ರಚಿ ತಳವಾರ, ಜಾನುವಾರು ಮೇಯಿಸುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಕಂಭದಲ್ಲಿ ಸಿಲುಕಿದ್ದ ಗಾಳಿಪಟವನ್ನು ನೋಡಿ, ಅದನ್ನು ಬಿಡಸಲು ಪ್ರಯತ್ನಿಸಿದ್ದ. ಈ ವೇಳೆ ವಿದ್ಯುತ್ ಶಾಕ್ ಹೊಡೆದು 2012ರ ಸೆ.11ರಂದು ಮೃತಪಟ್ಟಿದ್ದ. ಮಗನ ಸಾವಿನ ಬಳಿಕ ಪರಿಹಾರ ನೀಡುವಂತೆ ಹೆಸ್ಕಾಂ ಅನ್ನು ಪಾಲಕರು ಕೋರಿದ್ದರು. ಈ ಮನವಿಯನ್ನು ಹೆಸ್ಕಾಂ ಮತ್ತು ಲೋಕ ಅದಾಲತ್ನಲ್ಲಿ ತಿರಸ್ಕರಿಸಲಾಗಿದ್ದ ಕಾರಣ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು.
11 ವರ್ಷದ ಮಗುವಿನ ನಿರ್ಲಕ್ಷ್ಯವನ್ನು ವಯಸ್ಕರಿಗೆ ಸಮಾನವಾಗಿ ಪರಿಗಣಿಸಿ ಪರಿಹಾರ ನಿರಾಕರಿಸಲಾಗದು. ಮಕ್ಕಳಲ್ಲಿ ಕುತೂಹಲ ಸಹಜವಾಗಿದ್ದು, ವಯಸ್ಕರು ನಿರ್ಲಕ್ಷಿಸುವ ಗಾಳಿಪಟ, ಮರಗಳು ಮತ್ತು ವಿದ್ಯುತ್ ಕಂಬಗಳ ಕಡೆಗೆ ಸಹಜ ಆಕರ್ಷಣೆ ಇರುತ್ತದೆ. ಆದ್ದರಿಂದ ಹೈಟೆನ್ಷನ್ ತಂತಿಗಳ ಕಂಬ ಇರುವಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದ್ದದ್ದು, ಹೆಸ್ಕಾಂನ ಜವಾಬ್ದಾರಿ. ಹಾಗಿರುವಾಗ, ಬಾಲಕನ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಪರಿಹಾರ ನಿರಾಕರಿಸಲಾಗದು ಎಂದು ನ್ಯಾಯಪೀಠ ಹೇಳಿದೆ.