ನಾಟಿ ಕೋಳಿ ಸಾರು ಮತ್ತು ರಾಗಿ ಮುದ್ದೆ  
ರಾಜ್ಯ

16ಕ್ಕೆ ರಾಜ್ಯಮಟ್ಟದ ಮುದ್ದೆ ತಿನ್ನುವ ಸ್ಪರ್ಧೆ | Raagi Mudde

ಸರ್ಜಾಪುರ: ನಗರದ ಎಚ್​ಎಸ್​ಆರ್​ ಬಡಾವಣೆಯ ಪರಂಗಿಪಾಳ್ಯ ಹತ್ತಿರ ನ.16ರಂದು ಮಧ್ಯಾಹ್ನ 12 ರಿಂದ 12-45 ರವರೆಗೆ ರಾಜ್ಯೋತ್ಸವ ಅಂಗವಾಗಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ  ರಾಜ್ಯಮಟ್ಟದ ನಾಟಿ ಕೋಳಿ ಸಾರು ಮತ್ತು ರಾಗಿ ಮುದ್ದೆ ತಿನ್ನುವ ಸ್ಪರ್ಧೆಆಯೋಜನೆ ಮಾಡಲಾಗಿದೆ ಎಂದು ಆಯೋಜಕ ಅನಿಲ್​ ರೆಡ್ಡಿ ತಿಳಿಸಿದ್ದಾರೆ.
ಸರ್ಜಾಪುರ ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ,  ಪುರುಷರ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ ಟಗರು, ದ್ವೀತಿಯ ಬಹುಮಾನವಾಗಿ ಕುರಿ, ಮೂರನೇ ಬಹುಮಾನವಾಗಿ ನಾಲ್ಕು ನಾಟಿ ಕೋಳಿ ವಿತರಣೆ ಹಾಗೂ ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ 32 ಇಂಚಿನ ಟಿವಿ ಮತ್ತು ಐದು ಸಾವಿರ ನಗದು, ದ್ವೀತಿಯ ಬಹುಮಾನವಾಗಿ ಮಿಕ್ಸರ್​ ಗೆಂಡರ್​ ಮತ್ತು ನಾಲ್ಕು ಸಾವಿರ ನಗದು, ತೃತೀಯ ಬಹುಮಾನವಾಗಿ ಅಡುಗೆಮನೆ ಪರಿಕರಮತ್ತು ಮೂರು ಸಾವಿರ ರೂ. ನಗದು ನೀಡಲಾಗುವುದು ಎಂದರು.
ಪ್ರವೇಶ ಸಂಪೂರ್ಣವಾಗಿ ಉಚಿತವಾಗಿದೆ.ಮೊದಲು ಹೆಸರು ನೋಂದಾವಣೆ ಮಾಡುವ 125 ಜನರಿಗೆ  ಆದ್ಯತೆ ನೀಡಲಾಗುತ್ತದೆ. 45 ನಿಮಿಷಗಳ ಮಿತಿ ನೀಡಲಿದ್ದು, ಮದ್ಯಪಾನ ಮಾಡಿದವರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅನುಮತಿ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ವಿಧಾನ ಪರಿಷತ್​ ಸದಸ್ಯ ಬಿ.ಕೆ. ಹರಿಪ್ರಸಾದ್​ ಚಾಲನೆ ನೀಡುವರು.ಸಚಿವ ರಾಮಲಿಂಗಾರೆಡ್ಡಿ ಬಹುಮಾನ ವಿತರಿಸಲಿದ್ದಾರೆ. ಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ಗೌಡ, ಟಿ.ವಾಸುದೇವರೆಡ್ಡಿ, ಸಾಹಿತಿಗಳಾದ ಶೂದ್ರ ಶ್ರೀನಿವಾಸ್​, ಟಿ.ಎನ್​. ಸೀತಾರಾಮ್​, ಭಾರತೀಯ ಸೇವಾ ಸಮಿತಿ ರಾಷ್ಟ್ರೀಯ ಅಧ್ಯ ಡಾ.ಎಚ್​.ಎಂ.ರಾಮಚಂದ್ರ ಹಾಗೂ ವಕೀಲರ ಸಂದ ಪ್ರತಿನಿಧಿಗಳು ಆಗಮಿಸಲಿದ್ದಾರೆ. 
ಮುದ್ದೆ ನಾಟಿ ಕೋಳಿ ಸಾರು ತಿನ್ನುವ ಸ್ಪರ್ಧೆ ಮಂಡ್ಯ ಭಾಗದಲ್ಲಿ ನಡೆಯುತ್ತಿದ್ದು, ಬೆಂಗಳೂರು ನಗರದಲ್ಲೂ ಆ ವಾತಾವರಣ ಸೃಷ್ಟಿಸಲು ಎರಡನೇ ಬಾರಿ ಬೆಂಗಳೂರಿನ ಎಚ್​ಎಸ್​ಆರ್​ ಬಡಾವಣೆಯಲ್ಲಿ  ಆಯೋಜನೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ, ಹೈದರಾಬಾದ್​ ಕರ್ನಾಟಕ, ಮಧ್ಯ ಕರ್ನಾಟಕ ಭಾಗಗಳಲ್ಲಿ ಆಯಾ ಭಾಗಗಳ ಖಾದ್ಯಗಳನ್ನು ತಿನ್ನುವ ಸ್ಪರ್ಧೆ ಆಯೋಜನೆ ಮಾಡಲಾಗುವುದು ಎಂದು ಆಯೋಜಕ ಅನಿಲ್​ ರೆಡ್ಡಿ ತಿಳಿಸಿದರು.