- ಕಾಲಕಾಲಕ್ಕೆ ಬಡ್ತಿ ಸಿಗದೇ ನೌಕರರಲ್ಲಿ ನಿರುತ್ಸಾಹ, ನಕಾರಾತ್ಮಕ ಮನಸ್ಥಿತಿ
- ಬಡ್ತಿ ಮುಂದೂಡಲ್ಪಡುವುದರಿಂದ ನೌಕರರಿಗೆ ಹಣಕಾಸು ಲಾಭ ನಷ್ಟ
- ಬಡ್ತಿ ಪಡೆಯಲು ಅರ್ಹತೆ ಇದ್ದರೂ ಸಹ ನಿವೃತ್ತಿಯಾಗುವುದು
- ಕಳೆದ ಐದು ವರ್ಷದಲ್ಲೇ 15 ಸಾವಿರಕ್ಕಿಂತ ಹೆಚ್ಚು ನೌಕರರಿಗೆ ಅನ್ಯಾಯ
ಬೆಂಗಳೂರು: ಬಹುತೇಕ ಇಲಾಖೆಗಳಲ್ಲಿ ಕಾಲಕಾಲಕ್ಕೆ ಬಡ್ತಿ (promotion) ಪ್ರಕ್ರಿಯೆ ನಡೆಯುತ್ತಿಲ್ಲ, ಸರ್ಕಾರ ತಾನೇ ರೂಪಿಸಿಕೊಂಡ ನಿಯಮ ಪಾಲನೆ ಮಾಡುತ್ತಿಲ್ಲ ಎಂಬ ಗಂಭೀರ ಆರೋಪ ನೌಕರರ ವಲಯದಿಂದ ಕೇಳಿಬಂದಿದೆ.
ಕಾಲಕಾಲಕ್ಕೆ ಬಡ್ತಿ ನೀಡಬೇಕೆಂಬುದು ಕರ್ನಾಟಕ ನಾಗರೀಕ ಸೇವಾ ನಿಯಮದಲ್ಲೇ ಇದೆ. ಜತೆಗೆ ಇಲಾಖಾ ಮುಂಬಡ್ತಿ ಸಭೆಗಳನ್ನು ಯಾವಾಗ ನಡೆಸಬೇಕೆಂಬ ಬಗ್ಗೆಯೂ ಸ್ಪಷ್ಟತೆ ಇದೆ. ಆದರೂ ಬಹುತೇಕ ಇಲಾಖೆ ಅದನ್ನು ಪಾಲನೆ ಮಾಡುತ್ತಿಲ್ಲ.
ಇದರಿಂದ ನೌಕರರಿಗೆ ಸಿಗಬೇಕಾದ ಬಡ್ತಿಗಳು ಕಾಲಕಾಲಕ್ಕೆ ಸಿಗುತ್ತಿಲ್ಲ, ಬಡ್ತಿ ಜತೆಗೆ ಆರ್ಥಿಕ ಸೌಲಭ್ಯ ಮುಂದೂಡಲ್ಪಡುತ್ತಿದೆ. ಬಡ್ತಿ ಪಡೆಯಲು ಅರ್ಹರಾಗಿದ್ದರೂ ಬಡ್ತಿ ಇಲ್ಲದೇ ಕೊರಗಿಯೇ ನಿವೃತ್ತಿ ಹೊಂದುವ ಉದಾಹರಣೆ ಲೆಕ್ಕವಿಲ್ಲದಷ್ಟು. ಪ್ರತಿ ವರ್ಷ 2-3 ಸಾವಿರ ಎಂದರೂ ಐದು ವರ್ಷದಲ್ಲಿ 15 ಸಾವಿರ ಮಂದಿ ಬಡ್ತಿ ಇಲ್ಲದೆ ನಿವೃತ್ತರಾಗಿದ್ದಾರೆ. ಈ ಬೆಳವಣಿಗೆ ಒಂದು ಮಗ್ಗುಲಾದರೆ ಬಡ್ತಿ ಸಿಗದಂತೆ ‘ಕೈಚಳಕ’ ತೋರುವ ಬೆಳವಣಿಗೆ ಸಹ ನಡೆಯುತ್ತದೆ.
ನೌಕರರು, ಅಧಿಕಾರಿಗಳಿಗೆ ಯಾವುದೋ ಒಂದು ಕಾರಣ ನೀಡಿ ನೋಟಿಸ್ ನೀಡಿ ಆಂತರಿಕ ತನಿಖೆಯಾಗುವಂತೆ ಮಾಡುವುದು, ಆ ಮೂಲಕ ಬಡ್ತಿಗೆ ಸೇರಬೇಕಾದ ಹೆಸರು ಹೊರಗಿಡುವಂತೆ ಮಾಡುವುದು, ತನಿಖೆಯನ್ನು 2-3 ವರ್ಷ ಮುಂದುವರಿಸುವುದು ಅಥವಾ ಹೆಚ್ಚುವರಿ ಚಾರ್ಜ್ ನೀಡಿ ಅದೇ ವ್ಯವಸ್ಥೆಯಲ್ಲಿ ದೀರ್ಘಕಾಲ ಮುಂದುವರಿಯುವುದು, ಪದೋನ್ನತಿ ಸಭೆಗಳನ್ನು ನಡೆಸದಂತೆ ಮಾಡುವುದು, ಇಂತಹ ಚಟುವಟಿಕೆ ಸಾಮಾನ್ಯವಾಗಿದೆ ಎಂದು ಎಸ್ಸಿಎಸ್ಟಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರಯ್ಯ ವಿಜಯವಾಣಿಗೆ ವಿವರಿಸಿದರು.
ಉದ್ದೇಶಪೂರ್ವಕವಾಗಿ ಎಸ್ಸಿಎಸ್ಟಿ ನೌಕರರಿಗೆ ಬಡ್ತಿ ಸಿಗದಂತೆ ಮಾಡಲಾಗುತ್ತಿದೆ, ಈ ಆರೋಪಕ್ಕೆ ನಮ್ಮ ಬಳಿ ಸಾಕಷ್ಟು ಸಾಕ್ಷಿಯೂ ಇದೆ ಎಂದು ತಿಳಿಸಿರುವ ಅವರು, ಸರ್ಕಾರ ಕಣ್ಣುಮುಚ್ಚಿ ಕುಳಿತುಕೊಳ್ಳಬಾರದು ಎಂಬುದು ನಮ್ಮ ಆಗ್ರಹ ಎಂದು ಹೇಳಿದ್ದಾರೆ.
ಕಾರಣ ಕೆಲವು
ಕಾಲಕಾಲಕ್ಕೆ ನೇಮಕ ಆಗದೇ ಇರುವ ಕಾರಣ ಬಡ್ತಿ ನೀಡುತ್ತಾ ಹೋದರೆ ಕೆಳ ಹಂತದಲ್ಲಿ ಸಿಬ್ಬಂದಿ ಕೊರತೆಯಾಗಲಿದೆ. ಜತೆಗೆ ಬಡ್ತಿಗೆ ಸಂಬಂಧಿಸಿದ ಕಡತಗಳ ವಿಲೇವಾರಿ ನಿಧಾನವಾಗಿ ಆಗುತ್ತಿದೆ. ಬಡ್ತಿ ಪ್ರಕ್ರಿಯೆ ನಡೆಸಲು ಹಿರಿಯ ಅಧಿಕಾರಿಗಳ ನಿರಾಸಕ್ತಿ ವಹಿಸುವುದು, ಸಂಬಂಧಪಟ್ಟ ಸಚಿವರ ನಿರುತ್ಸಾಹ, ತಾಂತ್ರಿಕ ಸಮಸ್ಯೆಗಳು ಹೀಗೆ ಹತ್ತು ಹಲವು ಕಾರಣದಿಂದ ಕೆಲವು ಇಲಾಖೆಗಳಲ್ಲಿ 6-8 ವರ್ಷವಾದರೂ ಇಲಾಖಾ ಪದೋನ್ನತಿ ಸಭೆ ನಡೆಸದೆ ಇರುವ ಬೆಳವಣಿಗೆ ಕಂಡುಬಂದಿದೆ.
ಸುತ್ತೋಲೆ ಹೊರಡಿಸಲು ಸಿದ್ಧತೆ
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇನ್ನು ಮುಂದೆ ಪ್ರತಿ ಆರು ತಿಂಗಳಿಗೊಮ್ಮೆ ಇಲಾಖಾ ಪದೋನ್ನತಿ ಸಭೆಯನ್ನು ಕಡ್ಡಾಯ ನಡೆಸುವ ಕುರಿತು ಶೀಘ್ರವೇ ಒಂದು ನಿರ್ಣಯ ಹೊರಬೀಳಿದೆ.
ರಾಜ್ಯ ಸರ್ಕಾರಿ ಎಸ್ಸಿಎಸ್ಟಿ ನೌಕರರ ಸಂಘ ಈ ವಿಚಾರವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಗಮನಕ್ಕೆ ತಂದಿದೆ. ಬಡ್ತಿ ನೀಡದೇ ಇರಲು ಕಾರಣಗಳು, ಇದರಿಂದ ಆಗುವ ಸಮಸ್ಯೆಗಳನ್ನು ವಿವರಿಸಿದೆ. ತತ್ಪರಿಣಾಮ ಶೀಘ್ರವೇ ಒಂದು ಸುತ್ತೋಲೆ ಹೊರಡಿಸುವುದಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಖಚಿತ ಭರವಸೆಯನ್ನೂ ನೀಡಿದೆ.
ಎರಡು ದಿನದ ಹಿಂದಷ್ಟೇ ಇಲಾಖೆಯ ಕಾರ್ಯದರ್ಶಿ ಜಗದೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿದ್ದು, ತಡಮಾಡದೇ ಸುತ್ತೋಲೆ ಹೊರಡಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಖಚಿತಪಡಿಸಿದ್ದಾರೆ.
ಉದಾಹರಣೆ ಹಲವು
- ಶಿಕ್ಷಣ ಇಲಾಖೆಯಲ್ಲಿ ಇಂತಹ ಬೆಳವಣಿಗೆ ಸಾಕಷ್ಟಿದೆ. ಪಿಯು ಮಂಡಳಿ ಇದ್ದ ಸಂದರ್ಭದಲ್ಲಿ ಜಂಟಿ ನಿರ್ದೇಶಕರ ಸ್ಥಾನಕ್ಕೆ ಬಡ್ತಿ ನೀಡದೇ ಕೆಎಎಸ್ ಅಧಿಕಾರಿಗಳನ್ನು ತಂದು ಕೂರಿಸಲಾಗುತ್ತಿತ್ತು.
- ಕೆಲಸಕ್ಕೆ ಅರ್ಧಗಂಟೆ ತಡವಾಗಿ ಬಂದರೆಂದು ನೋಟಿಸ್ ನೀಡಿ ಬಳಿಕ ಚಾರ್ಜ್‌ಶೀಟ್ ಸಿದ್ಧಪಡಿಸದೇ ಸತಾಯಿಸುವುದು. ಪ್ರಕರಣ ವಿನಾಕಾರಣ ಮುಂದೂಡುವುದು.
- ತೋಟಗಾರಿಕೆ ಹಾಗೂ ಅರಣ್ಯ ಇಲಾಖೆಯ ವಿವಿಧ ವೃಂದದಲ್ಲಿ ಸರಿಯಾದ ಕಾಲಕ್ಕೆ ಬಡ್ತಿ ಪ್ರಕ್ರಿಯೆ ನಡೆದಿದ್ದೇ ವಿರಳ. ವಿನಾಕಾರಣ ಮುಂದೂಡಲಾಗುತ್ತಿದೆ.
- ಕೌಶಲ್ಯಾಭಿವೃದ್ಧಿ ಇಲಾಖೆಯಲ್ಲಿ ಆರು ವರ್ಷವಾದರೂ ಇಲಾಖಾ ಪದೋನ್ನತಿ ಸಭೆ ನಡೆಸದ ಉದಾಹರಣೆ ಇದೆ. ಸಭೆ ನಡೆಸದೇ ಇರುವುದಕ್ಕೆ ಕಾರಣವೇ ಇಲ್ಲ.
- ಯುವಜನ ಸೇವಾ ಇಲಾಖೆಯಲ್ಲೂ ಬಡ್ತಿಗೆ ಅರ್ಹತೆ ಪಡೆದವರು ಪದೋನ್ನತಿ ಸಭೆಗಾಗಿ ಎರಡು ವರ್ಷದಿಂದ ಕಾದವರಿದ್ದಾರೆ.
- ಆರೋಗ್ಯ ಇಲಾಖೆಯಲ್ಲಿ ಕೆಲವು ವೃಂದದಲ್ಲಿ ಆರು ವರ್ಷವಾದರೂ ಬಡ್ತಿ ನೀಡಿಲ್ಲ. ಪ್ರಾಥಮಿಕ ಶಾಲಾ ಶಿಕ್ಷಕರು ಮುಖ್ಯ ಶಿಕ್ಷಕರಾಗಿ ಬಡ್ತಿ ಸಿಗದೇ ದೊಡ್ಡ ಸಂಖ್ಯೆಯಲ್ಲಿ ನಿವೃತ್ತರಾದರು.
"
ಬಹುತೇಕ ಇಲಾಖೆಗಳಲ್ಲಿ ಇಲಾಖಾ ಪದೋನ್ನತಿ ಸಭೆ ಸರಿಯಾಗಿ ನಡೆಯುತ್ತಿಲ್ಲ, ಈ ವಿಷಯ ಸರ್ಕಾರದ ಗಮನಕ್ಕೆ ತರಲಾಗಿದೆ. ಪ್ರತಿ ಆರು ತಿಂಗಳಿಗೊಮ್ಮೆ ಇಲಾಖಾ ಪದೋನ್ನತಿ ಸಭೆ ಕರೆಯುವಂತೆ ಸುತ್ತೋಲೆ ಹೊರಡಿಸಲಾಗುತ್ತದೆ ಎಂಬ ಭರವಸೆ ಸಿಕ್ಕಿದೆ.
— - ಚಂದ್ರಶೇಖರಯ್ಯ, ಎಸ್ಸಿಎಸ್ಟಿ ನೌಕರರ ಸಂಘದ ಅಧ್ಯಕ್ಷ
"
ಸರ್ಕಾರಿ ನೌಕರರಿಗೆ ಕಾಲಕಾಲಕ್ಕೆ ಬಡ್ತಿ ನೀಡಬೇಕೆಂಬುದು ನಿಯಮದಲ್ಲೆ ಇದೆ. ಬೆರಳೆಣಿಕೆ ಇಲಾಖೆಯಲ್ಲಿ ನಿಯಮ ಪಾಲನೆಯಾಗುತ್ತಿದೆ. ನಿಯಮ ಪಾಲನೆಯಾಗದೇ ಇರುವುದರಿಂದ ನೌಕರರಿಗೆ ವಿವಿಧ ರೀತಿಯಲ್ಲಿ ನಷ್ಟವಾಗುತ್ತಿದೆ.
— - ಸಿ.ಎಸ್.ಷಡಾಕ್ಷರಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ