ಶಿವಮೊಗ್ಗ: ಮುಂಗಾರು ಮುಕ್ಕಾಲು ಭಾಗ ಮುಗಿದಿದ್ದರೂ ರಾಜ್ಯ ಸರ್ಕಾರ ಕೇವಲ 161 ತಾಲೂಕುಗಳನ್ನು ಮಾತ್ರ ಬರಪೀಡಿತವೆಂದು ಘೋಷಿಸಿದೆ. ಉಳಿದ 74 ತಾಲೂಕುಗಳನ್ನೂ ಬರಪೀಡಿತವೆಂದು ಘೋಷಿಸಬೇಕು. ಜತೆಗೆ ಮಧ್ಯಂತರ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಸೆ.25ರಂದು ರಾಜ್ಯಾದ್ಯಂತ ಡಿಸಿ ಹಾಗೂ ತಾಲೂಕು ಕಚೇರಿಗಳ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ತಿಳಿಸಿದರು.
ರಾಜ್ಯದಲ್ಲಿ ಈ ಬಾರಿ 235 ತಾಲೂಕುಗಳಲ್ಲಿ ಭೀಕರ ಬರಗಾಲ ಎದುರಾಗಿದೆ. ಆದರೂ ಸರ್ಕಾರ ಅಷ್ಟೂ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲು ಮೀನಾಮೇಷ ಮಾಡುತ್ತಿದೆ. ಬರ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ರೈತ ವಿರೋಧಿ ನೀತಿಗಳ ವಿರುದ್ಧ ಅಂದು ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬರದಿಂದ ಕೃಷಿಕರ ಬದುಕು ಅಲ್ಲೋಲ-ಕಲ್ಲೋಲ ಆಗುತ್ತಿದ್ದು ಸರ್ಕಾರ ಕೃಷಿಕರ ಸಂಕಷ್ಟಗಳನ್ನು ನಿರ್ಲಕ್ಷಿಸಿ ತನ್ನ ಗ್ಯಾರಂಟಿಗಳ ಸುತ್ತ ಗಿರಕಿ ಹೊಡೆಯುತ್ತಿದೆ. ಪ್ರತಿಪಕ್ಷಗಳೂ ಚುನಾವಣಾ ಸಿದ್ಧತೆಯಲ್ಲಿ ತೊಡಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತರಿಗೆ ಬೆಳೆ ಪರಿಹಾರಾರ್ಥವಾಗಿ ಎಕರೆಗೆ 25 ಸಾವಿರ ರೂ. ಘೋಷಿಸಬೇಕು. ಜನ ಜಾನುವಾರುಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಅಕ್ರಮ-ಸಕ್ರಮದಡಿ ಹಣ ಕಟ್ಟಿರುವ ಪಂಪ್‌ಸೆಟ್‌ಗಳಿಗೆ ಟಿಸಿ ಹಾಕಿಕೊಡಬೇಕು. ರೈತರ ಸಾಲ ಮನ್ನಾ ಮಾಡಬೇಕು. ಅರಣ್ಯ ಇಲಾಖೆ ರೈತರನ್ನು ಒಕ್ಕಲೆಬ್ಬಿಸುವುದನ್ನು ನಿಲ್ಲಿಸಬೇಕು. ಅರಣ್ಯ ಕಾಯ್ದೆಗೆ ತಿದ್ದುಪಡಿ ತಂದು ರೈತರಿಗೆ ಸಾಗುವಳಿ ಚೀಟಿ ನೀಡಬೇಕು. ಬೆಳೆ ವಿಮೆ ಪಡೆದುಕೊಂಡ ಕಂಪನಿಗಳು ತಕ್ಷಣವೇ ರೈತರಿಗೆ ಮಧ್ಯಂತರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಉಪಾಧ್ಯಕ್ಷ ಟಿ.ಎಂ.ಚಂದ್ರಪ್ಪ, ಜಿಲ್ಲಾಧ್ಯಕ್ಷ ಎಸ್.ಶಿವಮೂರ್ತಿ, ಜಿಲ್ಲಾ ಕಾರ್ಯಾಧ್ಯಕ್ಷ ಪಿ.ಡಿ.ಮಂಜಪ್ಪ, ಕೆ.ರಾಘವೇಂದ್ರ, ಗ್ರಾಮಾಂತರ ಅಧ್ಯಕ್ಷ ಕಸಟ್ಟಿ ರುದ್ರೇಶ್, ಶಿವಮೊಗ್ಗ ತಾಲೂಕು ಅಧ್ಯಕ್ಷ ಸಿ.ಚಂದ್ರಪ್ಪ ಸುದ್ದಿಗೋಷ್ಠಿಯಲ್ಲಿದ್ದರು.