ನ್ಯೂಸ್

ಬಿಜೆಪಿ ಸೋಲಿಗೆ ರಾಜ್ಯಾಧ್ಯಕ್ಷರೊಬ್ಬರೇ ಹೊಣೆಯಲ್ಲ: ಎನ್.ರವಿಕುಮಾರ್

ಬೆಂಗಳೂರು: ರಾಜ್ಯದಲ್ಲಿ ನಡೆದ 3 ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಸೋತಿರುವುದಕ್ಕೆ ಕೇವಲ ರಾಜ್ಯಾಧ್ಯಕ್ಷರೊಬ್ಬರೇ ಹೊಣೆಯಲ್ಲ. ಒಗ್ಗಟ್ಟಿನ ಕೊರತೆಯೂ ಕಾಎಣ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಭಾನುವಾರ ಮಾತನಾಡಿದ ಅವರು, ಈ ಸೋಲಿಗೆ ಪಕ್ಷವೇ ಜವಾಬ್ದಾರಿ ಹೊರಲಿದೆ. ಪಕ್ಷವು ಇದನ್ನು ಸವಾಲಾಗಿ ತೆಗೆದುಕೊಳ್ಳಲಿದೆ; ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಬೂತ್ ಮಟ್ಟದಿಂದ ಸಂಘಟಿಸಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತರಲಿದ್ದೇವೆ ಎಂದು ವಿಶ್ವಾಸದಿಂದ ತಿಳಿಸಿದರು.

ಕಾಂಗ್ರೆಸ್ಸಿಗರು ವಾಮ ಮಾರ್ಗದ ಮೂಲಕ, ವಕ್ರ ಮಾರ್ಗದ ಮೂಲಕ, ಹಣವನ್ನು ಹರಿಸುವ ಮೂಲಕ, ಜಾತಿ ವಿಷಬೀಜವನ್ನು ಬಿತ್ತಿ, ಅಲ್ಪಸಂಖ್ಯಾತರನ್ನು ಸಂಪೂರ್ಣವಾಗಿ ಒಗ್ಗಟ್ಟು ಮಾಡಿ, ಮುಖ್ಯಮಂತ್ರಿಗಳು ತಾನು ಸಿಎಂ ಆಗಿ 5 ವರ್ಷ ಇರಬೇಕೋ ಬೇಡವೋ ಎಂದು ಮಂತ್ರಿಗಳಿಗೆ, ಶಾಸಕರಿಗೆ ಕೇಳಿ, ಭಯವನ್ನುಂಟು ಮಾಡಿ ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸಿ ಗೆದ್ದಿದ್ದಾರೆ.

ಸೋಲಿನ ಅವಲೋಕನ

ಎನ್‍ಡಿಎ 3 ಸೀಟುಗಳನ್ನು ಸೋತಿದೆ. ಸೋಲಿನ ಅವಲೋಕನ ಮಾಡಿ ಬಿಜೆಪಿಯನ್ನು ಒಂದು ಬಲಿಷ್ಠ ಸಂಘಟನೆಯನ್ನಾಗಿ ರೂಪಿಸಿ ನಾವು ಮುಂದೆ ಅಧಿಕಾರಕ್ಕೆ ಬರುತ್ತೇವೆ ಎಂದು ಎನ್.ರವಿಕುಮಾರ್ ಪ್ರತಿಕ್ರಿಯಿಸಿದರು.

ಶಿಗ್ಗಾಂವಿಯಲ್ಲಿ ಅಲ್ಪಸಂಖ್ಯಾತರ ಮತಗಳೂ ಬಹಳ ದೊಡ್ಡ ಪ್ರಮಾಣದಲ್ಲಿ ಇದೆ. ನಮಗೆ ಬರುವ ಮತಗಳು ಸ್ವಲ್ಪ ಮಟ್ಟಿಗೆ ವಿಭಜನೆಯಾಗಿವೆ. ಅದರಲ್ಲಿ ಹಣವನ್ನು ಹರಿಸಿದ್ದಾರೆ, ವಾಮಮಾರ್ಗವಾಗಿ ಕೆಲಸ ಮಾಡಿದ್ದಾರೆ  ಸಚಿವರು ಬೀಡು ಬಿಟ್ಟಿದ್ದಾರೆ; ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬ ಶಾಸಕರನ್ನು ನೇಮಿಸಿದ್ದರು ಎಂದು ವಿವರಿಸಿದರು.

ಪಕ್ಷ ಎಂದ ಮೇಲೆ ಸಣ್ಣಪುಟ್ಟ ಗೊಂದಲಗಳಿರುತ್ತವೆ. ಇವನ್ನು ನಾವು ಸರಿಪಡಿಸಿ ಬಿಜೆಪಿಯನ್ನು ಕರ್ನಾಟಕದಲ್ಲಿ ಮತ್ತೆ ಪುನಃ ಒಳ್ಳೆಯ ರೀತಿಯಲ್ಲಿ ಕಟ್ಟುತ್ತೇವೆ. ಎದೆಗುಂದದ ಕಾರ್ಯಕರ್ತರ ಪಡೆಯಿದೆ ಎಂದರು.

ಅಧಿವೇಶನದಲ್ಲಿ ಈ ಸರಕಾರದ ಅಕ್ರಮಗಳು, ಭ್ರಷ್ಟಾಚಾರ, ವಕ್ಫ್ ರಾಕ್ಷಸಿ ಅವತಾರ ತಾಳಿ ರೈತರ ಜಮೀನುಗಳನ್ನು ವಶಪಡಿಸಿಕೊಳ್ಳುವ ಕೆಲಸ ಮಾಡಿದ್ದನ್ನು ಬಯಲಿಗೆಳೆಯುತ್ತೇವೆ ಎಂದು ಗುಡುಗಿದರು.

ಮುಡಾ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಗಳು, ರೈತರಿಗೆ ಪ್ರೋತ್ಸಾಹಧನ ನೀಡದೆ ಇರುವುದು, ಸರಕಾರಿ ನೌಕರರ ಆತ್ಮಹತ್ಯೆ, ರೈತರ ಆತ್ಮಹತ್ಯೆ ಮೊದಲಾದ ಅನೇಕ ವಿಷಯಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಕಟ್ಟಿ ಹಾಕುವ ಕೆಲಸ ಮಾಡುತ್ತೇವೆ ಎಂದು ಎನ್.ರವಿಕುಮಾರ್ ಹೇಳಿದರು.