ಕೋಲಾರ ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಜನಪರ ಉತ್ಸವ ಕುರಿತ ಪೂರ್ವ ಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಮಾತನಾಡಿದರು. ಬಿ.ನಿಖಿಲ್​, ಪ್ರವಿಣ್​ ಪಿ.ಬಾಗೇವಾಡಿ, ಶಿವಪ್ರಸಾದ್​ ಇದ್ದರು. 
ನ್ಯೂಸ್

ಮಾಸಾಂತ್ಯದಲ್ಲಿ ರಾಜ್ಯಮಟ್ಟದ ಜನಪರ ಉತ್ಸವ

ಕೋಲಾರ: ರಾಜ್ಯಮಟ್ಟದ ಜನಪರ ಉತ್ಸವ ಕಾರ್ಯಕ್ರಮವನ್ನು ನಗರದಲ್ಲಿ ೆಬ್ರವರಿ ಅಂತ್ಯದಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ಇದಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಜನಪರ ಉತ್ಸವ ಕುರಿತು ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕಾರ್ಯಕ್ರಮ ಆಯೋಜನೆ ಕುರಿತು ಸಮಿತಿಗಳನ್ನು ರಚಿಸಿ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗುವುದು. ಲೋಪದೋಷಗಳು ಎದುರಾಗದಂತೆ ನಿಭಾಯಿಸಬೇಕು ಎಂದು ಸೂಚಿಸಿದರು.

ಸ್ಥಳಿಯ ಹಾಗೂ ಹೊರ ಜಿಲ್ಲೆಗಳ ಕಲಾವಿದರ ತಂಡಗಳಿಂದ ಸಾಂಸತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು. ಜತೆಗೆ ಖ್ಯಾತ ಲೇಖಕರು, ಚಿಂತಕರಿಂದ ವಿವಿಧ ವಿಷಯಗಳ ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಕೋಲಾರವು ತನ್ನದೇ ಆದ ಜನಪದ ಕಲೆಗಳನ್ನು ಹೊಂದಿದೆ. ಜಿಲ್ಲೆಯಲ್ಲಿ ಇಂತಹ ವಿಭಿನ್ನ ಕಾರ್ಯಕ್ರಮ ಆಯೋಜಿಸಲು ಸರ್ಕಾರವು ಉತ್ತಮ ಅವಕಾಶ ನೀಡಿದೆ. ಎರಡು ದಿನಗಳ ಕಾರ್ಯಕ್ರಮ ಇದಾಗಿದ್ದು, 50 ಕಲಾ ತಂಡಗಳು ಭಾಗವಹಿಸಲಿವೆ. ಸುಮಾರು 10,000ಜನ ಸೇರುವ ನಿರೀಕ್ಷೆ ಇದ್ದು, ಇದು ಕೇವಲ ಜಿಲ್ಲಾಡಳಿತದ ಗೌರವದ ಪ್ರಶ್ನೆ ಅಲ್ಲ, ಬದಲಿಗೆ ಇಡೀ ಕೋಲಾರ ಜಿಲ್ಲೆಯ ಜನತೆಯ ಗೌರವದ ಪ್ರಶ್ನೆಯಾಗಿದೆ ಎಂದು ತಿಳಿಸಿದರು.

ವಸತಿಗಾಗಿ ನಗರದಲ್ಲಿರುವ ಸಮುದಾಯ ಭವನಗಳು ಹಾಗೂ ಕಲ್ಯಾಣ ಮಂಟಪಗಳಲ್ಲಿ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರಿನ ವ್ಯವಸ್ಥೆ ಊಟ&-ಉಪಹಾರಗಳ ವ್ಯವಸ್ಥೆ ಮಾಡಬೇಕು. ವಿದ್ಯುತ್​ ವ್ಯತ್ಯಯ ಉಂಟಾಗದಂತೆ ಕ್ರಮವಹಿಸಬೇಕು. ಏನಾದರು ರಿಪೇರಿ ಕೆಲಸಗಳು ಇದ್ದಲ್ಲಿ ಈಗಲೇ ಸರಿಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.

ಸಾರ್ವಜನಿಕರಿಗೆ ಕರಪತ್ರಗಳ ಮೂಲಕ ವ್ಯಾಪಕ ಪ್ರಚಾರ ಮಾಡಬೇಕು. ಎಲ್ಲ ಸರ್ಕಾರಿ ಕಟ್ಟಡಗಳಿಗೆ ದೀಪಾಲಂಕಾರ ಮಾಡಬೇಕು. ಅಲ್ಲದೇ ಖಾಸಗಿ ವ್ಯಾಪಾರಸ್ಥರು ಸಹ ತಮ್ಮ-ತಮ್ಮ ಅಂಗಡಿಗಳನ್ನು ವಿದ್ಯುತ್​ ದೀಪಗಳಿಂದ ಅಲಂಕರಿಸುವಂತೆ ಅವರ ಮನ ಒಲಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಪೊಲೀಸ್​ ವರಿಷ್ಠಾಧಿಕಾರಿ ಬಿ.ನಿಖಿಲ್​, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರವಿಣ್​ ಪಿ.ಬಾಗೇವಾಡಿ, ಅಪರ ಜಿಲ್ಲಾಧಿಕಾರಿ ಮಂಗಳಾ, ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್​, ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್​ ಹಾಜರಿದ್ದರು.

ಸಿಎಂ, ಸಚಿವರ ಆಗಮನ

ನಗರದ ಸರ್ಕಾರಿ ಜೂನಿಯರ್​ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಸಚಿವ ಸಂಪುಟದ ಸಚಿವರು ಆಗಮಿಸಲಿದ್ದಾರೆ. ಜಿಲ್ಲಾ ರಂಗಮಂದಿರ ಸೇರಿ ಮೂರು ಪರ್ಯಾಯ ವೇದಿಕೆ ಸಿದ್ಧಪಡಿಸಬೇಕು. ನಗರದ ಬಂಗಾರಪೇಟೆ ವೃತ್ತದಿಂದ ಮೆರವಣಿಗೆ ಆರಂಭವಾಗಿ ಬಸ್​ ನಿಲ್ದಾಣದ ಮೂಲಕ ಮೆಕ್ಕೆ ವೃತ್ತ ಜೂನಿಯರ್​ ಕಾಲೇಜು ಮೈದಾನದಲ್ಲಿ ಅಂತ್ಯವಾಗಬೇಕು ಎಂದಿ ಡಿಸಿ ತಿಳಿಸಿದರು.

ಸ್ವಚ್ಛತೆಗೆ ಒತ್ತು ನೀಡಿ

ಮುಖ್ಯ ವೇದಿಕೆಯನ್ನು ಜಿಲ್ಲೆಯ ನೆಲ-&ಜಲ, ಸಾಂಸತಿಕ ಅಂಶಗಳಿಂದ ವಿಶಿಷ್ಟವಾಗಿ ನಿರ್ಮಿಸಬೇಕು. ಕಾರ್ಯಕ್ರಮ ನಡೆಯುವ ವೇದಿಕೆಗಳ ಬಳಿ ಮೂರು ಕಡೆ ಊಟದ ವ್ಯವಸ್ಥೆ ಮಾಡಬೇಕು. ಜನಸಂದಣಿ ಹೆಚ್ಚಾಗದಂತೆ ಭದ್ರತಾ ವ್ಯವಸ್ಥೆ ಮಾಡಬೇಕು. ನಗರಸಭೆಯಿಂದ ಊಟ ಬಡಿಸುವ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ನಗರಾದ್ಯಂತ ವಿದ್ಯುತ್​ ದೀಪಗಳ ಅಲಂಕಾರ ಮಾಡಿ, ಮುಖ್ಯರಸ್ತೆಗಳಲ್ಲಿ ಕಾರ್ಯಕ್ರಮದ ಕುರಿತು ಅರಿವು ಮೂಡಿಸುವ ಕರಪತ್ರಗಳನ್ನು ಅಳವಡಿಸಬೇಕು ಎಂದು ಸಲಹೆ ನೀಡಿದರು.

ಕೋಲಾರದಲ್ಲಿ ಅಂಬೇಡ್ಕರ್​ ಛಾಯಾಚಿತ್ರ ಪ್ರದರ್ಶನ

ಮಳಿಗೆಗಳಲ್ಲಿ ಜಿಲ್ಲೆಯ ವಿವಿಧ ಕಲಾಪ್ರಕಾರಗಳ ಪ್ರದರ್ಶನ ಮಾಡಬೇಕು. ಸಾರ್ವಜನಿಕರಿಗೆ ವಿತರಿಸುವ ಆಹಾರದ ಗುಣಮಟ್ಟ ಹಾಗೂ ಶುಚಿತ್ವದ ಕುರಿತು ಸಂಬಂಧಿತ ಅಧಿಕಾರಿಗಳು ತಪಾಸಣೆ ಮಾಡಬೇಕು. ಮಳಿಗೆಗಳಲ್ಲಿ ಈ ಭಾಗದ ವಿಶೇಷ ಕೃಷಿ ಪರಿಕರಗಳ ಪ್ರದರ್ಶನ ಮಾಡಬೇಕು. ಡಾ.ಬಿ.ಆರ್​ ಅಂಬೇಡ್ಕರ್​ ಕೋಲಾರ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದ ಅಪರೂಪದ ಛಾಯಾಚಿತ್ರ ಪ್ರದರ್ಶನಕ್ಕಿಡಬೇಕು. ಸಂವಿಧಾನ ಪೀಠಿಕೆ ಮಾದರಿ ಸಿದ್ಧಪಡಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ದಲಿತ ಚಳವಳಿ ನೋಟ

ಗೋಷ್ಠೀಗಳಲ್ಲಿ ಕನ್ನಡ ಸಾಹಿತ್ಯಕ್ಕೆ ದಲಿತರ ಕೊಡುಗೆಗಳು, ದಲಿತ ವಚನಕಾರರ ಕೊಡುಗೆಗಳು, ದಲಿತ ಚಳವಳಿಯ ನೋಟ ಮುಂದಿನ ಸವಾಲುಗಳು ದಲಿತ ಚಳುವಳಿ ನಡೆದು ಬಂದ ದಾರಿ, ಸೇರಿ ವಿವಿಧ ವಿಶೇಷ ಮಂಡನೆ ಮಾಡಿಸಬೇಕು. ಉತ್ಸವದಲ್ಲಿ ಚಿತ್ರಕಲಾ ಶಿಬಿರ ಆಯೋಜಿಸಬೇಕು. ಒಟ್ಟಾರೆ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಬೇಕು ಎಂದು ಡಿಸಿ ತಿಳಿಸಿದರು.