ಕಿರುವಾರ ಎಸ್.ಸುದರ್ಶನ್ ಕೋಲಾರ
ಪ್ರಸಕ್ತ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಜಿಲ್ಲೆ ಶಿಕ್ಷಕರಿಗೆ ಸ್ಥಾನ ದೊರೆಯದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯ ಸರ್ಕಾರ ಮಂಗಳವಾರ ಪ್ರಶಸ್ತಿಗೆ ಭಾಜನರಾದವರ ಪಟ್ಟ್ಟಿ ಬಿಡುಗಡೆ ಮಾಡಿದೆ. ಆದರೆ, ಜಿಲ್ಲೆಯ ಯಾವೊಬ್ಬ ಶಿಕ್ಷಕರಿಗೂ ಗೌರವ ಸಂದಿಲ್ಲ.
ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿ ಜಿಲ್ಲೆಯಿಂದ ರಾಜ್ಯಕ್ಕೆ ಪಟ್ಟಿ ಕಳುಹಿಸಿಕೊಡಲು ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿತ್ತು. ಅದರಂತೆ, ಜಿಲ್ಲೆಯ ಶಿಕ್ಷಣಾಽಕಾರಿಗಳು ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದ್ದರು. ಸಲ್ಲಿಕೆಯಾಗಿದ್ದ ಅರ್ಜಿ ಪರಿಶೀಲಿಸಿ ಜಿಲ್ಲಾಽಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸರ್ಕಾರಕ್ಕೆ ಇಬ್ಬರು ಶಿಕ್ಷರನ್ನು ಶಿಫಾರಸು ಮಾಡಲಾಗಿತ್ತಾದರೂ, ಪ್ರಶಸ್ತಿ ಲಭಿಸದೆ ಇರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಇಬ್ಬರ ಹೆಸರು ಶಿಫಾರಸು
ಜಿಲ್ಲೆಯಲ್ಲಿ 4,412 ಪ್ರಾಥಮಿಕ ಶಿಕ್ಷಕರು ಹಾಗೂ 894 ಮಂದಿ ಪ್ರಾಢ ಶಾಲಾ ಶಿಕ್ಷಕರಿದ್ದಾರೆ. ಪ್ರಶಸ್ತಿಗೆ ಪ್ರಾಥಮಿಕ ವಿಭಾಗದಿಂದ ಚನ್ನಯ್ಯಗಾರಿಪಲ್ಲಿ ಶಿಕ್ಷಕ ಹಾಗೂ ಪ್ರೌಢ ಶಾಲಾ ವಿಭಾಗದಿಂದ ಕೋಲಾರ ತಾಲೂಕಿನ ಕುರಗಲ್ ಶಾಲೆಯ ಶಿಕ್ಷಕರ ಹೆಸರನ್ನು ಜಿಲ್ಲಾಮಟ್ಟದ ಸಮಿತಿಯಲ್ಲಿ ಅಂತಿಮಗೊಳಿಸಿ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಆದರೂ, ಪಟ್ಟಿಯಿಂದ ಹೆಸರು ಕೈಬಿಟ್ಟಿದ್ದು ಹೇಗೆ ಎಂಬ ಚರ್ಚೆ ಜೋರಾಗಿದೆ.
ಶಿಕ್ಷಕರ ಗುಂಪುಗಾರಿಕೆ?
ಶಿಕ್ಷಕರಲ್ಲಿ ಒಗ್ಗಟ್ಟು ಇಲ್ಲದೆ ಇರುವುದು ಪ್ರಶಸ್ತಿ ಕೈ ತಪ್ಪಲು ಪ್ರಮುಖ ಕಾರಣ ಎಂದು ಸಾಕಷ್ಟು ಶಿಕ್ಷಕರ ಆರೋಪವಾಗಿದೆ.
ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಜತೆಗೆ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಎಸ್ಸಿ-ಎಸ್ಟಿ ಶಿಕ್ಷಕರ ಸಂಘ, ಗ್ರಾಮೀಣ ಪ್ರಾಥಮಿಕ ಶಿಕ್ಷಕರ ಸಂಘ, ಪದವೀಧರರ ಸಂಘಗಳು ಹೀಗೆ ಹತ್ತು ಹಲವು ಸಂಘಗಳು ಇವೆ. ಈ ಸಂಘಗಳ ನಡುವೆ ಸಮನ್ವಯ ಇಲ್ಲದಿರುವುದು ಗುಂಪುಗಾರಿಕೆಗೆ ಕಾರಣವಾಗಿದೆ. ಕೆಲವರು, ಪದಾಽಕಾರದ ನೆಪದಲ್ಲಿ ಅಧಿಕಾರಗಳ ಮೇಲೆ ಒತ್ತಡ ತಂದು ಕಾರ್ಯನಿರ್ವಹಿಸುವ ಶಾಲೆಯಿಂದ ಪಟ್ಟಣ, ನಗರಕ್ಕೆ ನಿಯೋಜನೆ ಪಡೆದುಕೊಳ್ಳುವ ಆರೋಪವೂ ಇದೆ. ಇಲಾಖೆಯಿಂದ ಕಾರ್ಯಕ್ರಮ ಆಯೋಜನೆ ಮಾಡಿದಾಗ ಮಾತ್ರ ವೇದಿಕೆಯಲ್ಲಿ ಪ್ರಥಮ ಸಾಲಿನಲ್ಲಿ ಕುರ್ಚಿಗಾಗಿ ಕಾಯುತ್ತಾರೆ. ಆದರೆ, ಶೈಕ್ಷಣಿಕ ಪ್ರಗತಿಗೆ ಶ್ರಮ ಮಾತ್ರ ಅಷ್ಟಕಷ್ಟೇ.
ಪ್ರಶಸ್ತಿ ಆಯ್ಕೆಗೆ ಮಾನದಂಡಗಳು
ಮೂರು ವರ್ಷ ಬೋಧನೆಯಲ್ಲಿ ಬದಲಾವಣೆ ಕಂಡು ಮಕ್ಕಳ ಕಲಿಕೆಯಲ್ಲಿ ಸುಧಾರಣೆ ಮಾಡುವುದು, ವಿಶೇಷ ಚಟುವಟಿಕೆ, ವಿಶೇಷ ಹಾಗೂ ಸಹ ಪಠ್ಯ ಚಟುವಟಿಕೆಗಳಲ್ಲಿ ಧನಾತ್ಮಕ ಪರಿಣಾಮ ಸಾಧಿಸುವುದು, ಮಕ್ಕಳಲ್ಲಿ ಸಾಮಾಜಿಕ ಪ್ರಜ್ಞೆ, ವೃತ್ತಿ ಮಾರ್ಗದರ್ಶನ, ವ್ಯಕ್ತಿತ್ವ ನಿರ್ಮಾಣದಲ್ಲಿ ಸಮುದಾಯದ ಸಹಭಾಗಿತ್ವ ಹೀಗೆ ಹಲವು ಮಾನದಂಡಗಳ ಆಧಾರದಲ್ಲಿ ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.
ಕೋಟ್..
ಜಿಲ್ಲೆಯಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದಿಂದ ಇಬ್ಬರು ಶಿಕ್ಷಕರು ಹೆಸರುಗಳನ್ನು ಶಿಫಾರಸು ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಯಾವುದಾದರೂ ಒಂದು ವಿಭಾಗಕ್ಕೆ ದೊರೆಯಬಹುದೆಂಬ ನಿರೀಕ್ಷೆಯಿತ್ತು.-ಕೃಷ್ಣಮೂರ್ತಿ, ಡಿಡಿಪಿಐ, ಕೋಲಾರ
ಕೋಟ್..
ಜಿಲ್ಲೆಯಲ್ಲಿ ಅತ್ಯುತ್ತಮ ಶಿಕ್ಷಕರು ಸಾಕಷ್ಟು ಮಂದಿಯಿದ್ದಾರೆ. ಅವರು ಶೈಕ್ಷಣಿಕ ಪ್ರಗತಿಗೆ ಕೊಡುಗೆ ನೀಡುತ್ತಿದ್ದಾರೆ. ಈ ಬಾರಿ ರಾಜ್ಯಮಟ್ಟದ ಪ್ರಶಸ್ತಿ ದೊರೆಯದೆ ಇರುವುದು ಬೇಸರದ ಸಂಗತಿ.- ಅನಿಲ್‌ಕುಮಾರ್
ಮಾಜಿ ಅಧ್ಯಕ್ಷರು, ಪ್ರಾಥಮಿಕ ಶಾಲಾ ಶಿಕ್ಷಕ ಸಂಘ, ಕೋಲಾರ