ಉಡುಪಿ: ನಿಟ್ಟೂರು ಸರ್ಕಾರಿ ರಾಜ್ಯ ಮಹಿಳಾ ನಿಲಯ ಸತತ 2ನೇ ವರ್ಷವೂ ಮದುವೆ ಮನೆಯಾಗಿ ಪರಿವರ್ತನೆಗೊಂಡಿದ್ದು, ಬುಧವಾರ ಎರಡು ಜೋಡಿಗಳು ಹೊಸ ಬದುಕಿಗೆ ಪಾದಾರ್ಪಣೆ ಮಾಡಿದರು.
ತುಮಕೂರು ಮೂಲದ ಶೀಲಾ (32) ಮೊಳಹಳ್ಳಿಯ ಕೃಷಿಕ ಗಣೇಶ್ ಶಾಸ್ತ್ರಿ (42) ಹಾಗೂ ಭದ್ರಾವತಿ ಮೂಲದ ಕುಮಾರಿ (21) ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಸತ್ಯನಾರಾಯಣ ಭಟ್ ಅವರ ಕೈಹಿಡಿದರು. ಸ್ವತ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರೇ ಬಂದು ಕನ್ಯಾದಾನ ನೆರವೇರಿಸಿ, ಉಡುಗೊರೆ ನೀಡಿದರು. ಉಡುಪಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳೇ ಮುಂದೆ ನಿಂತು ಶಾಸೊಕ್ತವಾಗಿ ವಿವಾಹ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ನಿಲಯ ಅಧೀಕ್ಷಕಿ ಪುಷ್ಟಾರಾಣಿ, ಯುವಕ ಮತ್ತು ಯುವತಿಗೆ ಒಪ್ಪಿಕೊಂಡ ಬಳಿಕ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ವರರ ಆರೋಗ್ಯದೃಢೀಕರಣ ಹಾಗೂ ಪೊಲೀಸ್ ವರದಿಯೊಂದಿಗೆ ಊರಿನವರಿಂದ ನಡೆದ ಪ್ರಮಾಣಪತ್ರ ಮತ್ತು ಆದಾಯ ಪ್ರಮಾಣಪತ್ರ ತೆಗೆದುಕೊಳ್ಳಲಾಗಿದೆ. ಇಲಾಖೆಯ ಪರಿವೀಕ್ಷಣಾಧಿಕಾರಿಗಳಿಂದ ಗೃಹ ತನಿಖೆ ವರದಿ ಪಡೆದು ಬುಧವಾರ ವಿವಾಹ ನೋಂದಣಿ ಮಾಡಲಾಗಿದೆ. ಹುಡುಗಿ ಖಾತೆಯಲ್ಲಿ ಸರ್ಕಾರದಿಂದ 15 ಸಾವಿರ ರೂ. ನಿಖರ ಠೇವಣಿ ಇಡಲಾಗಿದ್ದು, 3 ವರ್ಷದ ಬಳಿಕ ಈ ಹಣವನ್ನು ಮಧು ಬಳಸಿಕೊಳ್ಳಬಹುದು. ಮಹಿಳಾ ನಿಲಯದಲ್ಲಿ ಈವರೆಗೆ 24 ಮದುವೆಗಳು ನಡೆದಿವೆ. ಮದುವೆ ಬಳಿಕವೂ ಯುವತಿ 3 ವರ್ಷ ಮಹಿಳಾ ನಿಲಯದ ಪರಿವೀಕ್ಷಣೆಗೆ ಒಳಪಡಲಿದ್ದಾಳೆ ಎಂದು ತಿಳಿಸಿದರು.
ದಾನಿಗಳ ನೆರವು
ಮದುವೆಗಾಗಿ ಸರ್ಕಾರದಿಂದ 5 ಸಾವಿರ ರೂ. ನೀಡಲಾಗುತ್ತದೆ. ಉಳಿದ ಖರ್ಚುವೆಚ್ಚಗಳಿಗೆ ದಾನಿಗಳ ನೆರವು ಪಡೆಯಲಾಗಿದೆ. ಅಂಬಲಪಾಡಿ ದೇವಸ್ಥಾನದಿಂದ 300 ಮಂದಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಹೃಹಯರ ಬಳಗದವರು ಇಬ್ಬರೂ ಮದುಮಕ್ಕಳಿಗೆ ಚಿನ್ನದ ಬೆಂಡೊಲೆ, ಮಾಜಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಮದುಮಗಳಿಗೆ ಸೀರೆ ನೀಡಿದ್ದಾರೆ. ಐಸ್ಕ್ರೀಂ, ಮದುಮಗಳ ಮೇಕಪ್, ತರಕಾರಿ, ತಂಪುಪಾನೀಯ, ಸ್ವಾಗತ ಅಲಂಕಾರಕ್ಕೆ ದಾನಿಗಳು ಸಹಕರಿಸಿದ್ದಾರೆ.
ಶಾಸಕ ಯಶ್ ಪಾಲ್ ಸುವರ್ಣ, ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ., ಜಿಪಂ ಸಿಇಒ ಪ್ರಸನ್ನ, ಉಪವಿಭಾಗಾಧಿಕಾರಿ ರಶ್ಮಿ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೆಶಕಿ ಶಾಮಲಾ, ಶಿಶು ಅಭಿವೃದ್ಧಿ ಅಧಿಕಾರಿ ವೀಣಾ ವಿವೇಕಾನಂದ ಉಪಸ್ಥಿತರಿದ್ದರು.