ನ್ಯೂಸ್

ಇಳಿ ವಯಸ್ಸಿನಲ್ಲಿ ಸಿಧು ಮೂಸೆವಾಲ ಪೋಷಕರಿಗೆ ಗಂಡು ಮಗು ಜನನ; ಆರೋಗ್ಯ ಕಾರ್ಯದರ್ಶಿಗೆ ಶೋಕಾಸ್​ ನೋಟಿಸ್​ ಜಾರಿ

ಅಮೃತಸರ: ಕೆಲ ದಿನಗಳ ಹಿಂದೆ ಗಂಡು ಮಗುವನ್ನು ಸ್ವಾಗತಿಸಿ ಸಂಭ್ರಮಿಸಿದ್ದ ದಿವಂಗತ ಗಾಯ ಸಿಧು ಮೂಸೆವಾಲಾ ಪೋಷಕರಿಗೆ ಒಂದಿಲ್ಲೊಂದು ಸಂಕಷ್ಟಗಳು ಎದುರಾಗುತ್ತಿದ್ದು, ಇದೀಗ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಜೋಯ್‌ ಶರ್ಮಾ ಅವರಿಗೆ ಪಂಜಾಬ್‌ ಸರ್ಕಾರ ಶೋಕಾಸ್‌ ನೋಟಿಸ್‌ ಜಾರಿ ಮಾಡಿದೆ.

ದಿವಂಗತ ಗಾಯಕ ಸಿಧು ಮೂಸೆವಾಲಾ ಅವರ ತಾಯಿ ಐವಿಎಫ್‌ ಚಿಕಿತ್ಸೆ ಪಡೆದುಕೊಂಡಿರುವ ವಿಷಯವನ್ನು ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರ ಗಮನಕ್ಕೆ ಏಕೆ ತಂದಿಲ್ಲ ಎಂದು ಪ್ರಶ್ನಿಸಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಜೋಯ್‌ ಶರ್ಮಾ ಅವರಿಗೆ ಪಂಜಾಬ್‌ ಸರ್ಕಾರ ಶೋಕಾಸ್‌ ನೋಟಿಸ್‌ ಜಾರಿ ಮಾಡಿದ್ದು, ಉತ್ತರಿಸುವಂತೆ ಸೂಚಿಸಿದೆ.

ಚರಣ್‌ ಕೌರ್‌ (ಸಿಧು ಅವರ ತಾಯಿ) ಅವರ ಐವಿಎಫ್‌ ಚಿಕಿತ್ಸೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತಮ್ಮಿಂದ ವರದಿ ಕೇಳಿದೆ. ಈ ಕುರಿತು ನೀವು ನಿಮ್ಮ ಉಸ್ತುವಾರಿ ಸಚಿವರು ಮತ್ತು ಮುಖ್ಯಮಂತ್ರಿಯ ಗಮನಕ್ಕೆ ತಂದು, ಮುಂದಿನ ಕ್ರಮಗಳ ಕುರಿತು ಆದೇಶಗಳನ್ನು ಪಡೆಯಬೇಕಿತ್ತು. ಆದರೆ ನೀವು ಈ ರೀತಿ ಮಾಡದೇ, ಈ ವಿಷಯದಲ್ಲಿ ಕ್ರಮ ತೆಗೆದುಕೊಂಡಿದ್ದೀರಿ. ಇದು ಗಂಭೀರ ಲೋಪವಾಗಿದ್ದು, ನಿಮ್ಮ ವಿರುದ್ಧ ಅಖಿಲ ಭಾರತ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮ, 1969ರ ಅಡಿಯಲ್ಲಿ ಏಕೆ ಪ್ರಕ್ರಿಯೆಗಳನ್ನು ಪ್ರಾರಂಭಿಸಬಾರದು. ಈ ಕುರಿತು ಎರಡು ವಾರಗಳಲ್ಲಿ ಕಾರಣ ನೀಡಿ ಎಂದು ಜಾರಿ ಮಾಡಲಾಗಿರುವ ನೋಟಿಸ್​ನಲ್ಲಿ ಸೂಚಿಸಲಾಗಿದೆ.

ಎರಡನೇ ಪುತ್ರನನ್ನು ಸ್ವಾಗತಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಭಗವಂತ್​ ಮಾನ್​ ನೇತೃತ್ವದ ಪಂಜಾಬ್​ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ದಿವಂಗತ ಪಂಜಾಬಿ ಗಾಯಕ ಸಿಧು ಮೂಸೆವಾಲ ಅವರ ತಂದೆ ಬಾಲಕೌರ್​ ಸಿಂಗ್​ ಗಂಭೀರ ಆರೋಪ ಮಾಡಿದ್ದರು. ಈ ಮಗು ಕಾನೂನುಬದ್ಧವಾಗಿದೆ ಎಂದು ಸಾಬೀತುಪಡಿಸಲು ಸರ್ಕಾರ ಒತ್ತಾಯಿಸುತ್ತಿದೆ.

ಎಲ್ಲಾ ಚಿಕಿತ್ಸೆಗಳು ಮುಗಿಯಲು ಅವಕಾಶ ನೀಡುವಂತೆ ನಾನು ಸರ್ಕಾರವನ್ನು, ವಿಶೇಷವಾಗಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ವಿನಂತಿಸಲು ಬಯಸುತ್ತೇನೆ. ನಾನು ಎಲ್ಲಿಯೂ ಹೋಗಿಲ್ಲ, ಇಲ್ಲಿಯೇ ಇದ್ದೇನೆ. ನೀವು ನನ್ನನ್ನು ಕರೆಯುವ ಯಾವುದೇ ಸ್ಥಳಕ್ಕೆ ಬಂದು ವಿಚಾರಣೆ ಎದುರಿಸಲು ಸಿದ್ಧನಿದ್ದೇನೆ ಎಂದು ಬಾಲಕೌರ್​ ಸಿಂಗ್ ಹೇಳಿದರು.