ಬೆಂಗಳೂರು: ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಅವರ ಮದುವೆ ಮಾಡಿದ್ದರು. ಮಗನ ವಿವಾಹವನ್ನು ಅದ್ದೂರಿಯಿಂದ ಮಾಡಲು ಸಿದ್ಧತೆ ಮಾಡಿಕೊಂಡಿದ್ದ ಕುಮಾರಸ್ವಾಮಿ ಅವರ ಆಸೆಗೆ ಕರೊನಾ ಲಾಕ್ಡೌನ್ ತಡೆಯಾಗಿತ್ತು.
ಲಾಕ್ಡೌನ್ ಇರುವುದರಿಂದ ನಿಖಿಲ್ ಅವರ ವಿವಾಹ ಅಂದುಕೊಂಡಷ್ಟು ಅದ್ದೂರಿಯಾಗಿ ನಡೆಯದೆ ಇದ್ದರೂ, ಕುಟುಂಬದವರು, ಆಪ್ತರ ಸಮ್ಮುಖದಲ್ಲಿ ತಕ್ಕಮಟ್ಟಿಗೆ, ಸಂಭ್ರಮದಿಂದ ನಡೆದಿತ್ತು.
ಆದರೆ ವಿವಾಹದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಎಚ್. ಡಿ.ಕುಮಾರಸ್ವಾಮಿಯವರ ಪುತ್ರನ ವಿವಾಹದಲ್ಲಿ ಲಾಕ್ಡೌನ್ ನಿಯಮಗಳು ಉಲ್ಲಂಘನೆಯಾಗಿವೆ. ಸಾಮಾಜಿಕ ಅಂತರ ನಿಯಮಗಳ ಪಾಲನೆಯಾಗಿಲ್ಲ. ಮಾಸ್ಕ್ ಧರಿಸಿಲ್ಲ..ನಾಯಕರೆನಿಸಿಕೊಂಡವರೇ ಹೀಗೆ ಬೇಜವಾಬ್ದಾರಿಯಿಂದ ನಡೆದುಕೊಂಡರೆ ಹೇಗೆ? ಎಂಬಿತ್ಯಾದಿ ಕೊಂಕುಗಳು ಕೇಳಿಬಂದಿದ್ದವು.
ಆದರೆ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಬಗ್ಗೆ ಹೆಚ್ಚೇನೂ ಹೇಳದೆ, ಕುಮಾರಸ್ವಾಮಿಯವರು ನಮ್ಮ ಅನುಮತಿ ಪಡೆದೇ ಪುತ್ರನ ವಿವಾಹ ಮಾಡಿದ್ದಾರೆ. ಅಲ್ಲಿ ಯಾವುದೇ ನಿಯಮಗಳೂ ಉಲ್ಲಂಘನೆ ಆಗಿಲ್ಲ ಎಂದಿದ್ದರು.
ಅಷ್ಟಾದ ಮೇಲೆ, ಎಚ್.ಡಿ.ಕುಮಾರಸ್ವಾಮಿಯವರೂ ಕೂಡ ಟ್ವೀಟ್ ಮಾಡುವ ಮೂಲಕ ಯಡಿಯೂರಪ್ಪನವರಿಗೆ ಕೃತಜ್ಞತೆ ಸಲ್ಲಿಸಿದ್ದರು. ನಾವು ಎಲ್ಲ ನಿಯಮಗಳನ್ನೂ ಪಾಲಿಸಿದ್ದೇವೆ ಎಂದು ಸಮರ್ಥನೆ ಕೊಟ್ಟಿದ್ದರು.
ಇದನ್ನೂ ಓದಿ: ಹೈಕೋರ್ಟ್ ಮೆಟ್ಟಿಲೇರಿತು ನಿಖಿಲ್ ವಿವಾಹ: ಸಾಮಾಜಿಕ ಅಂತರ ಕಾಯ್ದುಕೊಂಡ ಬಗ್ಗೆ ವರದಿ ನೀಡುವಂತೆ ನ್ಯಾಯಾಧೀಶರ ಸೂಚನೆ
ಈ ಮಧ್ಯೆ ನಿಖಿಲ್ ಅವರ ಮದುವೆಯಲ್ಲಿ ಲಾಕ್ಡೌನ್ ನಿಯಮಗಳು ಸರಿಯಾಗಿ ಪಾಲನೆಯಾಗಿದ್ದವಾ ಎಂದು ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತೆ, ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.
ಅದರ ಅನ್ವಯ ರಾಜ್ಯಸರ್ಕಾರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ. ಲಾಕ್ಡೌನ್ ಅವಧಿಯಲ್ಲಿ ನಡೆದ ನಿಖಿಲ್ ಕುಮಾರಸ್ವಾಮಿ ಮದುವೆಗೆ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯಲಾಗಿತ್ತು. ಡಿವೈಎಸ್ಪಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ನೀಡಲಾಗಿತ್ತು.
ವಧು-ವರರ ಕುಟುಂಬದವರು ಖಾಸಗಿಯಾಗಿ ಸುರಕ್ಷತಾ ವ್ಯವಸ್ಥೆ ಮಾಡಿಕೊಂಡಿದ್ದರು. ಮದುವೆಗೆ ಆಗಮಿಸಿದವರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲು ಆರೋಗ್ಯ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಹಾಗೇ ಅಲ್ಲಿ ಆಗಮಿಸಿದ್ದ ಅತಿಥಿಗಳಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಿದ್ದನ್ನು ಅಧಿಕಾರಿಗಳೇ ಖಚಿತ ಪಡಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.