ನ್ಯೂಸ್

ರಾಜ್ಯ ಸರ್ಕಾರದಿಂದ ಉನ್ನತ ಶಿಕ್ಷಣ ಕಡೆಗಣನೆ

ಶಿವಮೊಗ್ಗ: ರಾಜ್ಯ ಸರ್ಕಾರ ಉನ್ನತ ಶಿಕ್ಷಣಕ್ಕೆ ಒತ್ತು ನೀಡುತ್ತಿಲ್ಲ. ಅನುದಾನ ಬಿಡುಗಡೆ ಮಾಡುತ್ತಿಲ್ಲ. ಉನ್ನತ ಶಿಕ್ಷಣ ಸಚಿವರು ಘಟಿಕೋತ್ಸವಗಳಲ್ಲಿ ಭಾಗವಹಿಸುತ್ತಿಲ್ಲ. ಈಗ ಸರ್ಕಾರ 9 ವಿವಿಗಳನ್ನು ಮುಚ್ಚಲು ಮುಂದಾಗಿದೆ. ಸರ್ಕಾರದ ಈ ನಡೆ ಖಂಡಿಸಿ ಹೋರಾಟ ರೂಪಿಸಲಾಗುವುದು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಡಿ.ಎಸ್.ಅರುಣ್ ಎಚ್ಚರಿಸಿದರು.

ಬಿಜೆಪಿ ಅಧಿಕಾರಾವಧಿಯಲ್ಲಿ ರೂಪಿಸಿದ್ದ ಹೊಸ ವಿವಿಗಳನ್ನು ಮುಚ್ಚಲು ರಾಜ್ಯ ಸರ್ಕಾರ ತಂತ್ರ ರೂಪಿಸುತ್ತಿದೆ. ಸರ್ಕಾರದ ನಡೆಯಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅನ್ಯಾಯವಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಹಿಂದುಳಿದ ಜಿಲ್ಲೆಗಳ 9 ವಿವಿಗಳನ್ನು ಮುಚ್ಚಲು ಸರ್ಕಾರ ತೀರ್ಮಾನಿಸಿರುವುದರಿಂದ ಆ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಒಟ್ಟಾರೆ ಬಜೆಟ್‌ನ ಶೇ.1ರಷ್ಟು ಹಣವನ್ನೂ ಉನ್ನತ ಶಿಕ್ಷಣಕ್ಕೆ ಸರ್ಕಾರ ಮೀಸಲಿಟ್ಟಿಲ್ಲ. 2016-17ರಲ್ಲಿ ಉನ್ನತ ಶಿಕ್ಷಣಕ್ಕೆ ಒಟ್ಟಾರೆ ಬಜೆಟ್‌ನ ಶೇ.6ರಷ್ಟು ಅನುದಾನ ಮೀಸಲಿಡಲಾಗಿತ್ತು. ಈಗ ಸರ್ಕಾರ ರಚನೆಗೊಂಡು 21 ತಿಂಗಳು ಕಳೆದಿದ್ದರೂ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.