ನ್ಯೂಸ್

ರಾಜ್ಯ ಸರ್ಕಾರಕ್ಕೆ 10 ನೂತನ ಸಚಿವರು; ಪ್ರಮಾಣವಚನ ಸ್ವೀಕರಿಸಿದ ಮಂತ್ರಿಗಳಲ್ಲಿ ಸಮಾಧಾನದ ನಗು

ಬೆಂಗಳೂರು: ಅಂತೂ ರಾಜ್ಯ ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಇಂದು ನಡೆದಿದೆ.

ರಾಜಭವನದಲ್ಲಿ ರಾಜ್ಯಪಾಲ ವಿ.ಆರ್.ವಾಲಾ ಅವರು ರಾಜ್ಯ ಸರ್ಕಾರದ 10 ಸಚಿವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ಉಪಸ್ಥಿತರಿದ್ದರು.

ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ ಎಲ್ಲ ಸಚಿವರ ಮೊಗದಲ್ಲಿ ಬಹುದಿನದ ನೀರಿಕ್ಷೆ ಸಫಲಗೊಂಡ ಸಂತೋಷ ಕಾಣುತ್ತಿತ್ತು. ಈ ವೇಳೆ ಅಪಾರಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ನೆರೆದಿದ್ದರು.

ಮೊದಲು ಎಸ್​.ಟಿ.ಸೋಮಶೇಖರ್​ (ಯಶವಂತಪುರ)ಆಗಮಿಸಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಅವರಾದ ಬಳಿಕ ರಮೇಶ್​ ಜಾರಕಿಹೊಳಿ (ಗೋಕಾಕ), ಆನಂದ್​ ಸಿಂಗ್(ವಿಜಯನಗರ)​, ಡಾ. ಸುಧಾಕರ್ (ಚಿಕ್ಕಬಳ್ಳಾಪುರ)​, ಬೈರತಿ ಬಸವರಾಜ್(ಕೆ.ಆರ್.ಪುರಂ)​, ಶಿವರಾಮ ಹೆಬ್ಬಾರ್(ಯಲ್ಲಾಪುರ)​, ಬಿ.ಸಿ.ಪಾಟೀಲ್ (ಹಿರೇಕೆರೂರು)​, ಕೆ.ಗೋಪಾಲಯ್ಯ(ಮಹಾಲಕ್ಷ್ಮಿ ಲೇಔಟ್), ನಾರಾಯಣಗೌಡ(ಕೆ.ಆರ್.ಪೇಟೆ), ಶ್ರೀಮಂತ್​ ಪಾಟೀಲ್​ (ಕಾಗವಾಡ) ಪ್ರಮಾಣವಚನ ಸ್ವೀಕರಿಸಿದರು.

ಹೊಸಮಂತ್ರಿಗಳೆಲ್ಲರಿಗೂ ರಾಜ್ಯಪಾಲ ವಿ.ಆರ್​.ವಾಲಾ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಹೂಗುಚ್ಛ ಕೊಟ್ಟು ಅಭಿನಂದನೆ ಸಲ್ಲಿಸಿದರು.