ನ್ಯೂಸ್

ಸಿಎಂ ಚರ್ಚೆಯಿಂದ ರಾಜ್ಯಕ್ಕೆ ಪ್ರಯೋಜನ ಇಲ್ಲ; ಸ್ವಪಕ್ಷೀಯರ ವಿರುದ್ಧ ಅಸಮಾಧಾನ

ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಕುರಿತು ತಮ್ಮ ಅಭಿಪ್ರಾಯ ಹೊರಹಾಕುತ್ತಿರುವ ಸ್ವಪಕ್ಷೀಯರ ವಿರುದ್ಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪರೋಕ್ಷ ಅಸಮಾಧಾನ ಹೊರಹಾಕಿದ್ದಾರೆ.
ಇದೆಲ್ಲಾ ಚರ್ಚೆಯಾಗುವಂತಹ ವಿಷಯವೇ ಅಲ್ಲ. ಸಿದ್ದರಾಮಯ್ಯ ಗಟ್ಟಿಯಾಗಿದ್ದಾರೆ. ಮುಖ್ಯಮಂತ್ರಿಯವರು ಇದ್ದಾಗ ಈ ಚರ್ಚೆಯ ಅಗತ್ಯವೇ ಇಲ್ಲ. ಇಂತಹ ಚರ್ಚೆಯಿಂದ ರಾಜ್ಯಕ್ಕೂ ಪ್ರಯೋಜನ ಇಲ್ಲ. ಅರ್ಹತೆ, ಜನಪ್ರಿಯತೆ ಆಧಾರದ ಮೇಲೆ ಸಿಎಂ ಸ್ಥಾನ ಸಿಗಲಿದೆ. ಈಗ
ಅತ್ಯಂತ ಜನಪ್ರಿಯ ನಾಯಕ ಮುಖ್ಯಮಂತ್ರಿ ಆಗಿದ್ದಾರೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದರು.
ಒಬ್ಬ ಅನುಭವಿ, ದಕ್ಷ ಆಡಳಿತಗಾರ ಸಿಎಂ ಆಗಿದ್ದಾರೆ. ಒಳ್ಳೆಯ ವಿಚಾರಧಾರೆ, ಸಿದ್ಧಾಂತ ಇದೆ. ರಾಜ್ಯಕ್ಕೆ ಇದಕ್ಕಿಂತ ಇನ್ನೇನು ಬೇಕು. ಅದು ಬಿಟ್ಟು ಬಹಿರಂಗ ಚರ್ಚೆ ಹಾಸ್ಯಾಸ್ಪದವಲ್ಲವೇ ಎಂದು ಪ್ರಶ್ನಿಸಿದರು.
ದೀಪಾವಳಿಗೆ ಸರ್ಕಾರ ಪತನವಾಗುತ್ತೆ ಎಂಬ ಸಿ.ಟಿ ರವಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ,
ಸರ್ಕಾರ ಬೀಳುತ್ತೆ ಎಂದು ಅವರು ಹಗಲು ಕನಸು ಕಾಣೋದಾದರೆ ಕಾಣಲಿ, ಅದರಲ್ಲೇ ಸಂತೋಷ ಸಿಗುತ್ತೆ ಅನ್ನೋದಾದರೆ ಸಿಗಲಿ, ಅವರು ಯಾವಾಗಲೂ ಸುದ್ದಿಯಲ್ಲಿರಬೇಕು ಎಂದು ಹೀಗೆ ಮಾತಾಡುತ್ತಿರುತ್ತಾರೆ ಎಂದರು.
ಸರ್ಕಾರಕ್ಕೆ ಕೆಟ್ಟ ಹೆಸರು ತಂದು ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದು, ಉಡಾಫೆ, ಅನಾವಶ್ಯಕವಾಗಿ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಜನರು ಇದಕ್ಕೆಲ್ಲಾ ಕಿವಿಗೊಡಬಾರದು ಅಂತಾ ಮನವಿ ಮಾಡುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಎದುರಾಗಲಿದೆ ಎಂಬ ಎಚ್.ಡಿ.ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಹಿರಿಯ ರಾಜಕಾರಣಿ. ಕೇಂದ್ರದಲ್ಲಿ ಒಳ್ಳೆಯ ಖಾತೆಯನ್ನು ವಹಿಸಿಕೊಂಡಿದ್ದಾರೆ. ಕರ್ನಾಟಕಕ್ಕೆ ಒಳ್ಳೆಯದನ್ನ ಮಾಡಲಿ. ಹೊಸ ಹೊಸ ಕೈಗಾರಿಕೆಗಳು ಕರ್ನಾಟಕಕ್ಕೆ ಬರುವಂತೆ ಮಾಡಬೇಕು. ಇರುವ ಕೈಗಾರಿಕೆಗಳ ಅಭಿವೃದ್ಧಿ ಕಡೆ ಗಮನಹರಿಸಬೇಕು. ಅದ ಬಿಟ್ಟು ಗೊಂದಲದ ಹೇಳಿಕೆ ನೀಡಿದರೆ ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದರು.
ನಾವೀಗ 136 ಜನ ಶಾಸಕರು ಇದ್ದೇವೆ. ಬೇಕಾದರೆ ಈ ಸಂಖ್ಯೆಯನ್ನು ನಾವು ಇನ್ನೂ ಹೆಚ್ಚಿಸಿಕೊಳ್ಳಬಹುದು. ಬೇರೆ ಪಕ್ಷಗಳಿಂದಲೂ ನಮ್ಮ ಪಕ್ಷಕ್ಕೆ ಬರುವವರು ಇದ್ದಾರೆ. ಆದರೆ ಅಂತಹ ರಾಜಕಾರಣ ನಮಗೆ ಬೇಕಿಲ್ಲ. ನಮ್ಮ ಪಕ್ಷಕ್ಕೆ ಶಕ್ತಿ ಇದೆ, ಕೆಲಸವನ್ನು ಮಾಡುತ್ತೇವೆ. ಮುಂದಿನ ಅವಧಿಗೂ ನಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದ ಅವರು ಬಿಜೆಪಿಗೆ ಸರ್ಕಾರ ಉರುಳಿಸುವುದೇ ಸಾಮಾನ್ಯವಾಗಿಬಿಟ್ಟಿದೆ. ಅವರ ಬಳಿ ಬೇಕಾದಷ್ಟು ದುಡ್ಡಿದೆ ಎಂದು ಹೇಳಿದರು.