ನ್ಯೂಸ್

ರಾಜ್ಯ ಕೈ ನಾಯಕರಿಗೆ ಹರಿಪ್ರಸಾದ್ ಆತಂಕ

ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಕೋಟೆಯೊಳಗೆ ಸುದೀರ್ಘ ಕಾಲದಿಂದ ಇರುವ ಬಿ.ಕೆ.ಹರಿಪ್ರಸಾದ್ ಇದೇ ಮೊದಲ ಬಾರಿಗೆ ರಾಜ್ಯ ರಾಜಕೀಯ ಪ್ರವೇಶಿಸಿರುವುದು ರಾಜ್ಯ ಮುಖಂಡರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ಕಾಂಗ್ರೆಸ್​ನ ಕೆಲವು ಶಾಸಕರು ಒಂದು ಕಡೆ ಸೇರಿದ್ದ ಸಂದರ್ಭದಲ್ಲಿ ಈ ಬಗ್ಗೆ ಅನೌಪಚಾರಿಕವಾಗಿ ಚರ್ಚೆ ನಡೆಸಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

13 ರಾಜ್ಯಗಳ ಉಸ್ತುವಾರಿ ಜವಾಬ್ದಾರಿ ನಿಭಾಯಿಸಿರುವ ಹರಿಪ್ರಸಾದ್ ಕರ್ನಾಟಕದಿಂದ ಹೊರಗಿದ್ದಿದ್ದೇ ಹೆಚ್ಚು. ಆದರೆ, ರಾಜ್ಯದಲ್ಲಿನ ಬೆಳವಣಿಗೆ ಬಗ್ಗೆ ಆಗಿಂದಾಗೆ ಹೈಕಮಾಂಡ್​ಗೆ ವರದಿ ಮಾಡುತ್ತಿದ್ದರು ಎಂಬುದು ಗುಟ್ಟಾಗಿ ಉಳಿದ ವಿಷಯವೇನಲ್ಲ. ರಾಜ್ಯ ಘಟಕದಲ್ಲಿನ ಗುಂಪುಗಾರಿಕೆ, 2018ರ ವಿಧಾನಸಭೆ ಚುನಾವಣೆ ಸೋಲಿನ ಮುನ್ಸೂಚನೆ ಸೇರಿ ಹಲವು ವಿಚಾರಗಳನ್ನು ದೆಹಲಿ ನಾಯಕರಿಗೆ ವಿವರಿಸಿದ್ದರು. ಇದೀಗ ಬಿ.ಕೆ.ಹರಿಪ್ರಸಾದ್ ನೇರವಾಗಿ ರಾಜ್ಯ ರಾಜಕಾರಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಧಾನಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದೆ ರಾಜ್ಯದ ಬಹುತೇಕ ನಾಯಕರಿಗೆ ಅಚ್ಚರಿ. ಜತೆಗೆ ಅವರು ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾದರೆ ಬೇರೆ ವಾತಾವರಣ ಸೃಷ್ಟಿಯಾಗುತ್ತದೆ ಎಂದು ನಂಬಿಕೊಂಡಿದ್ದಾರೆ.

ಪ್ರಸ್ತುತ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಮುಂಚೂಣಿಯಲ್ಲಿ ಕಾಣಸಿಕೊಳ್ಳುತ್ತಿದ್ದಾರೆ. ಪ್ರಮುಖ ತೀರ್ವನಗಳನ್ನು ಕೈಗೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಿ.ಕೆ.ಹರಿಪ್ರಸಾದ್ ಅವರನ್ನು ಈ ಇಬ್ಬರು ಮುಂಚೂಣಿ ನಾಯಕರು ಕಡೆಗಣಿಸುವಂತಿಲ್ಲ ಎಂಬಂತಾಗಿದೆ ಎಂದು ಬೆಂಗಳೂರಿನ ಶಾಸಕರೊಬ್ಬರು ಉಸುರಿದ್ದಾರೆ. ಈ ಹಿಂದೆ ರಾಜ್ಯಸಭಾ ಸದಸ್ಯರಾಗಿದ್ದಾಗಲೇ ಅವರು ರಾಜ್ಯ ಘಟಕದ ವಿರುದ್ಧ ಹೈಕಮಾಂಡ್​ಗೆ ದೂರಿತ್ತಿದ್ದರು. ತಮ್ಮನ್ನು ಪರಿಗಣಿಸುವುದಿಲ್ಲ ಎಂದು ದೂರಿಗೆ ಪ್ರತಿಯಾಗಿ ಹಿಂದಿನ ಅಧ್ಯಕ್ಷರು ಪ್ರತ್ಯೇಕ ಸಭೆ ಕರೆದ ಉದಾಹರಣೆಯೂ ಇದೆ.

ಮುಂದಿನ ದಿನಗಳಲ್ಲಿ ಎಐಸಿಸಿಯಲ್ಲಿ ಆಗುವ ಬದಲಾವಣೆಗಳಲ್ಲಿ ಬಿ.ಕೆ.ಹರಿಪ್ರಸಾದ್ ಸ್ಥಾನ ಹಿಡಿಯುವುದು ಸ್ಪಷ್ಟ. ಈ ಮೂಲಕ ರಾಜ್ಯ ಕಾಂಗ್ರೆಸ್​ನಲ್ಲಿ ಮತ್ತೊಂದು ಶಕ್ತಿಕೇಂದ್ರವಾಗಲಿದೆ ಎಂಬ ಮಾತೂ ಇದೆ.

ಆದರೆ ಇದನ್ನು ಒಪ್ಪದ ಇನ್ನೊಂದು ಗುಂಪು ಹರಿಪ್ರಸಾದ್ ಅವರನ್ನು ಬೇರೆ ರಾಜ್ಯದಿಂದ ರಾಜ್ಯಸಭೆಗೆ ಕಳುಹಿಸಬಹುದಿತ್ತು, ಹೈಕಮಾಂಡ್​ಗೆ ಇಷ್ಟವಿಲ್ಲದೇ ರಾಜ್ಯಕ್ಕೆ ಕಳುಹಿಸಿದ್ದಾರೆ. ರಾಹುಲ್ ಗಾಂಧಿ ಮೊದಲಿನಿಂದಲೂ ಹರಿಪ್ರಸಾದ್ ಅವರ ಮಾತನ್ನು ಕೇಳುವುದಿಲ್ಲವೆಂದು ವಾದಿಸುತ್ತದೆ.