ನ್ಯೂಸ್

ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ; ಸರ್ಕಾರಕ್ಕೆ ಎಂಎಲ್ಸಿ ಐವನ್ ಡಿಸೋಜಾ ಬೇಡಿಕೆ

ವಿಜಯವಾಣಿ ಸುದ್ದಿಜಾಲ ಮಂಗಳೂರು

ಕರ್ನಾಟಕ ಕರಾವಳಿಯ ಸಮಗ್ರ ಅಭಿವೃದ್ಧಿ ಉದ್ದೇಶದಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಭಾಗದ ಜನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುವುದಾಗಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ತಿಳಿಸಿದ್ದಾರೆ.

ರಾಜಧಾನಿ ಬೆಂಗಳೂರು ಹೊರತುಪಡಿಸಿ ಈಗಾಗಲೇ ಚಾಮರಾಜನಗರ, ನಂದಿಹಿಲ್ಸ್, ಕಲಬುರ್ಗಿಯಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು, ವಿಜಯಪುರದಲ್ಲಿ ಮುಂದಿನ ಅಧಿವೇಶನ ನಡೆಯಲಿದ್ದು, ಬಳಿಕ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಬೇಕು. ಸಚಿವ ಸಂಪುಟ ಸಬೆ ನಡೆದ ಎಲ್ಲ ಪ್ರದೇಶಗಳ ಅಗತ್ಯಗಳು ಸಂಬಂಧಪಟ್ಟ ರಾಜ್ಯದ ಎಲ್ಲ ಸಚಿವರ ಗಮನ ಸೆಳೆದು ಅಗತ್ಯ ಯೋಜನೆಗಳು ರೂಪುಗೊಂಡಿವೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ದಕ್ಷಿಣ ಕನ್ನಡ ಸಹಿತ ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಕುರಿತು ಯಾವಾಗಲೂ ರಾಜ್ಯ ಮಟ್ಟದಲ್ಲಿ ಕೂಡ ಚರ್ಚೆಯಾಗುತ್ತಿದೆ. ಆದರೆ ಇಲ್ಲಿಯ ತನಕ ಪ್ರವಾಸೋದ್ಯಮ ಸಂಬಂಧಿಸಿ ಈ ಪ್ರದೇಶಕ್ಕೆ ದೊಡ್ಡ ಯೋಜನೆ ಘೋಷಣೆಯಾಗಿಲ್ಲ. ಮೀನುಗಾರಿಕೆಗೆ ಪೂರಕವಾಗಿ ಕರಾವಳಿಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಅಭಿವೃದ್ದಿಗೆ ವಿಶೇಷ ಪ್ಯಾಕೇಜ್ ಅಗತ್ಯವಿದೆ. ಮಂಗಳೂರು ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ದರ್ಜೆಯಾಗಿ ಗುರುತಿಸಿಕೊಂಡಿದ್ದರೂ, ಆ ಘೋಷಣೆಗೆ ಪೂರಕವಾಗಿ ಬೆಳೆದಿಲ್ಲ. ಟೇಬಲ್ ಟಾಪ್ ಎಂಬ ಕಾರಣದೊಂದಿಗೆ ಈ ವಿಮಾನ ನಿಲ್ದಾಣ ವಿಸ್ತರಣೆಗೆ 30,000 ಕೋಟಿ ರೂ.ಗಳ ಅಗತ್ಯವಿದೆ. ಮಂಗಳೂರಿನಲ್ಲಿ ಸಚಿವ ಸಂಪುಟದ ಸಭೆ ನಡೆದರೆ ಕರಾವಳಿಯ ಅಭಿವೃದ್ದಿಗೆ ಪೂರಕವಾದ ಚರ್ಚೆಗಳಿಗೆ ಅವಕಾಶ ದೊರೆಯಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಭಾಸ್ಕರ್, ನಾಗೇಂದ್ರ ಕುಮಾರ್, ಕೇಶವ ಮರೋಳಿ, ಸತೀಶ್ ಪೆಂಗಲ್, ಪ್ರೇಮ್ ಬಳ್ಳಾಲ್‌ಬಾಗ್, ಜೇಮ್ಸ್, ವಸಂತ ಶೆಟ್ಟಿ, ಮೀನಾ ಟೆಲ್ಲಿಸ್ ಉಪಸ್ಥಿತರಿದ್ದರು.