ಬೆಂಗಳೂರು: ಏರಿಕೆಯಾಗಿರುವ ಇಂಧನ ದರದ ಮೇಲಿನ ರಾಜ್ಯ ಸರ್ಕಾರದ ತೆರಿಗೆ ಇಳಿಸಿ ಕೊಂಚ ರಿಲೀಫ್ ನೀಡಲಿದ್ದಾರೆಂಬ ಜನರ ನಿರೀಕ್ಷೆ ಈ ಬಾರಿಯ ಬಜೆಟ್ನಲ್ಲಿ ಹುಸಿಯಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ರಾಜ್ಯ ಸರ್ಕಾರವು ಕರ್ನಾಟಕ ಮಾರಾಟ ತೆರಿಗೆ (ಕೆಎಸ್ಟಿ)ಯನ್ನು ವಿಧಿಸುತ್ತದೆ. ಈ ದರವು ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಈಗಾಗಲೇ ಕಡಿಮೆ ಇದೆ. ಆದರೂ ಸಹ 2021-22ನೇ ಸಾಲಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಮೇಲೆ ವಿಧಿಸುವ ಮಾರಾಟ ತೆರಿಗೆಯನ್ನು ಹೆಚ್ಚಿಸದೇ ಸಾಮಾನ್ಯ ಜನರಿಗೆ ಆರ್ಥಿಕ ಹೊರೆಯಾಗದಂತೆ ಬಜೆಟ್ನಲ್ಲಿ ಸೂತ್ರೀಕರಿಸಲಾಗಿದೆ ಎಂದು ಸಿಎಂ ಬಿಎಸ್ವೈ ಬಜೆಟ್ ಮಂಡನೆ ವೇಳೆ ತಿಳಿಸಿದರು.
ಇಂಧನ ದರದ ಮೇಲೆ ಯಾವುದೇ ತೆರಿಗೆ ಬದಲಾವಣೆ ಮಾಡದೇ ಇರುವುದರಿಂದ ರಾಜ್ಯದಲ್ಲಿ ಇಂಧನ ಬೆಲೆ ಯಥಾಸ್ಥಿತಿ ಮುಂದುವರಿಯಲಿದ್ದು, ತೆರಿಗೆ ಇಳಿಕೆಯ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಜನರಿಗೆ ಶಾಕ್ ಆಗಿದೆ. ಈಗಾಗಲೇ ಇಂಧನ ದರ ನೂರರ ಗಡಿಯತ್ತ ಬಂದಿದೆ. ಇದರಿಂದ ಅಗತ್ಯವಸ್ತುಗಳ ಬೆಲೆಯು ಏರಿಕೆಯಾಗಿದ್ದು, ಈ ಆರ್ಥಿಕ ಹೊರೆ ಇನ್ನೆಷ್ಟು ದಿನ ಹೀಗೆ ಇರುತ್ತದೆ ಎಂಬುದೇ ಜನರ ಚಿಂತೆಯಾಗಿದೆ.