ಮಲೆನಾಡಿನ ಅದರಲ್ಲೂ ಶಿವಮೊಗ್ಗ ಜಿಲ್ಲೆಯವರೇ ಆದ ಬಿ.ಎಸ್. ಯಡಿಯೂರಪ್ಪ ಮಂಡಿಸುವ ಆಯವ್ಯಯದ ಮೇಲೆ ಈ ಭಾಗದ ಜನರ ನಿರೀಕ್ಷೆ ಹೆಚ್ಚಿದೆ. ಶಂಕುಸ್ಥಾಪನೆ ನೆರವೇರಿರುವ ಕಾಮಗಾರಿಗಳಿಗೆ ಅನುದಾನ ಮೀಸಲಿಡುವ ಜತೆಗೆ ಹೊಸ ಯೋಜನೆಗಳನ್ನು ಘೊಷಿಸುವ ವಿಶ್ವಾಸವಿದೆ. ಕಾಫಿ, ಅಡಕೆ ಬೆಳೆಗಾರರ ಹಿತ ಕಾಯುವ ಜತೆಗೆ ನೀರಾವರಿ ಯೋಜನೆಗಳು, ರೈಲ್ವೆ ಸಂಪರ್ಕ ಹೆಚ್ಚಳ, ಮಂಗನ ಕಾಯಿಲೆಗೆ ಶಾಶ್ವತ ಪರಿಹಾರ, ಕೈಗಾರಿಕೆ, ಪ್ರವಾಸೋದ್ಯಮ ಮೂಲ ಸೌಕರ್ಯಕ್ಕೆ ಒತ್ತು ನೀಡುವ ಯೋಜನೆ ಘೊಷಿಸುವ ನಿರೀಕ್ಷೆ ಇದೆ.
1. ಮತ್ತೆರಡು ವಿವಿ?
ಯಡಿಯೂರಪ್ಪ ಡಿಸಿಎಂ ಆಗಿದ್ದಾಗಲೇ ಆಯುಷ್ ವಿವಿ ಸ್ಥಾಪನೆಗೆ ಸ್ಥಳ ಗುರುತಿಸಿದ್ದರು. 100 ಎಕರೆ ಭೂಮಿ ಮೀಸಲಿರಿಸಿದ್ದರು. ಈ ಬಜೆಟ್ನಲ್ಲಿ ಅನುದಾನ ಘೊಷಿಸಲು ಹಲವು ಸಂಘ-ಸಂಸ್ಥೆಗಳು ಸಿಎಂ ಮೇಲೆ ಒತ್ತಡ ಹೇರಿವೆ. ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಿವಮೊಗ್ಗದಲ್ಲಿ ಪಶು ವೈದ್ಯಕೀಯ ವಿವಿ ಸ್ಥಾಪನೆಗೆ ಸಿಎಂ ಒಲವು ತೋರಿದ್ದು, ಬಜೆಟ್ನಲ್ಲಿ ಘೊಷಣೆ ನಿರೀಕ್ಷೆ ಇದೆ.
2. ಅಡಕೆ ಟಾಸ್ಕ್ಫೋರ್ಸ್ಗೆ ಬಲ
ಅಡಕೆ ಬೆಳೆಗಾರರ ಹಿತ ಕಾಯಲು ಸ್ಥಾಪನೆಯಾದ ಅಡಕೆ ಟಾಸ್ಕ್ ಫೋರ್ಸ್ಗೆ ಆರ್ಥಿಕ ಬಲ ತುಂಬುವ ಕೆಲಸ ಬಜೆಟ್ನಲ್ಲಿ ಆಗಬೇಕಿದೆ. ಅಡಕೆಯ ಅನ್ಯಬಳಕೆ ಬಗ್ಗೆ ಸಂಶೋಧನೆ, ಕೊಳೆರೋಗ ನಿಯಂತ್ರಣಕ್ಕೆ ಪರ್ಯಾಯ ಮಾರ್ಗ, ಹಳದಿ ಎಲೆ ರೋಗಕ್ಕೆ ತುತ್ತಾದ ತೋಟಗಳ ಮಾಲೀಕರಿಗೆ ಪರಿಹಾರ ಸೇರಿ ಅನೇಕ ಸವಾಲುಗಳನ್ನು ಎದುರಿಸಲು ಅನುದಾನ ಘೊಷಿಸಬೇಕಿದೆ. ಅಡಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬ ಬಗ್ಗೆ ರಾಜ್ಯ ಸರ್ಕಾರ ಸಂಶೋಧನೆ ಆರಂಭಿಸಿದೆ. ಇದೇ ವೇಳೆ ಕೇಂದ್ರ ಸರ್ಕಾರವೂ ಪ್ರತ್ಯೇಕವಾಗಿ ಸಂಶೋಧನೆ ನಡೆಸಬೇಕಿದೆ. ಅಡಕೆ ಬೆಂಬಲ ಬೆಲೆ ಹೆಚ್ಚಿಸುವ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪಿಸಬೇಕಿದೆ.
3. ಕಸ್ತೂರಿ ರಂಗನ್, ಹುಲಿ ಯೋಜನೆ ಭಯ
ಮಲೆನಾಡಿಗರನ್ನು ಕಾಡುತ್ತಿರುವ ಕಸ್ತೂರಿ ರಂಗನ್ ವರದಿ ಗುಮ್ಮವನ್ನು ದೂರಾಗಿಸಬೇಕಿದೆ. ವರದಿ ಜಾರಿ ವೇಳೆ ಕೆಲ ಪ್ರದೇಶಗಳನ್ನು ಕೈಬಿಡುವ ಬಗ್ಗೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಇನ್ನೂ ಮಾಹಿತಿ ನೀಡಿಲ್ಲ. ಚಿಕ್ಕಮಗಳೂರಿನ ಹಲವು ಗ್ರಾಮಗಳನ್ನು ಹೊಸದಾಗಿ ಹುಲಿ ಸಂರಕ್ಷಣಾ ಯೋಜನಾ ಪ್ರದೇಶದೊಳಕ್ಕೆ ಸೇರಿಸಿರುವ ಬಗ್ಗೆ ಈಗಾಗಲೆ ವ್ಯಾಪಕ ಆಕ್ರೋಶವಿದೆ.
4. ಕೊಡಗು ಮರುನಿರ್ವಣ
ಸತತ 3 ವರ್ಷ ಧಾರಾಕಾರವಾಗಿ ಸುರಿದ ಮಳೆಗೆ ತತ್ತರಿಸಿ ಹೋಗಿರುವ ಕೊಡಗಿನಲ್ಲಿ ಅಪಾರ ಪ್ರಮಾಣದ ನಷ್ಟವಾಗಿದೆ. ಕಷ್ಟ-ನಷ್ಟ ಪರಿಹಾರಕ್ಕೆ ಬಜೆಟ್ನಲ್ಲಿ ವಿಶೇಷ ಅನುದಾನ ಘೊಷಿಸುವ ಅಗತ್ಯತೆ ಇದೆ. ಕೊಡಗು ಮರುನಿರ್ವಣ ಪ್ರಾಧಿಕಾರ ರಚನೆಯೊಂದಿಗೆ ಅನುದಾನ ಒದಗಿಸಬೇಕೆಂಬುದು ಅತ್ಯಂತ ಪ್ರಮುಖ ಬೇಡಿಕೆಯಾಗಿದೆ.
5. ಕೆಎಫ್ಡಿಗೆ ಅರೆಯಲಿ ಮದ್ದು
ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ದಶಕಗಳಿಂದ ಕಾಡುತ್ತಿರುವ ಕೆಎಫ್ಡಿ (ಮಂಗನ ಕಾಯಿಲೆ)ಗೆ ಇನ್ನೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಕೆಎಫ್ಡಿ ಸಂಶೋಧನಾ ಕೇಂದ್ರ ಸ್ಥಾಪನೆಗೆ ಕಳೆದ ಎರಡು ಬಜೆಟ್ನಲ್ಲೂ ಪ್ರಸ್ತಾಪವಾಗಿದೆ. ಆದರೆ ಅದಿನ್ನೂ ಕಾರ್ಯಗತವಾಗಿಲ್ಲ. ಮಂಗಗಳ ಹಾವಳಿ ತಡೆಗಟ್ಟಲು ಮಂಕಿ ಪಾರ್ಕ್ ಸ್ಥಾಪನೆಗೆ ಕಳೆದ ಬಜೆಟ್ನಲ್ಲೇ ಅನುದಾನ ಘೊಷಣೆಯಾಗಿದೆ. ಆದರೆ ಜಾಗ ಅಂತಿಮವಾಗಿಲ್ಲ. ಹೀಗಾಗಿ ಬಜೆಟ್ನಲ್ಲಿ ಕೆಎಫ್ಡಿ ಹಾಗೂ ಮಂಕಿ ಪಾರ್ಕ್ ಗೊಂದಲಕ್ಕೆ ತೆರೆ ಎಳೆಯಬೇಕಿದೆ.
ಶಿವಮೊಗ್ಗ
ಪ್ರಮುಖ ಬೇಡಿಕೆಗಳು ಚಿಕ್ಕಮಗಳೂರು
ಕೊಡಗು