ನ್ಯೂಸ್

ಲೋಕಸಭೆ ಚುನಾವಣೆಗೆ ಸಿದ್ಧತೆ; ಆಗಸ್ಟ್‌ನಲ್ಲಿ ಫೀಲ್ಡ್‌ಗಿಳಿಯಲಿದೆ ಕಮಲಪಡೆ

ಮೃತ್ಯುಂಜಯ ಕಪಗಲ್

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಿಂದಿನ ಸಾಧನೆಯನ್ನು ರಾಜ್ಯದಲ್ಲಿ ಪುನರಾವರ್ತಿಸಲು ಬಿಜೆಪಿ ವರಿಷ್ಠರು ಮೊದಲ ಹಂತದ ಕಾರ್ಯತಂತ್ರ ಹೆಣೆದಿದ್ದಾರೆ. ‘ಪ್ರವಾಸಿ ಕಾರ್ಯಯೋಜನೆ’ ಭಾಗವಾಗಿ ಆಗಸ್ಟ್‌ನಲ್ಲಿ ಫೀಲ್ಡ್‌ಗೆ ಇಳಿಯಲು ಸಿದ್ಧತೆ ಮಾಡಿಕೊಳ್ಳುವಂತೆಯೂ ರಾಜ್ಯ ನಾಯಕರಿಗೆ ಸೂಚಿಸಿದೆ.

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆದ ಲೋಕಸಭೆ ಚುನಾವಣೆಗೆ ರಾಷ್ಟ್ರೀಯ ಪ್ರವಾಸಿ ಸಂಚಾಲಕ ವಿನೋದ್ ತಾವ್ಡೆ ನೇತೃತ್ವದಲ್ಲಿ ಶನಿವಾರ ಸಭೆ ನಡೆದಿದೆ. ರಾಜ್ಯ ನಾಯಕರ ಜತೆ ಚರ್ಚಿಸಿ ಮೂರು ಸ್ತರದ ಪ್ರವಾಸಿ ಕಾರ್ಯಯೋಜನೆ ರೂಪಿಸಿಕೊಳ್ಳಲು ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ಮೊದಲ ಹಂತದಲ್ಲಿ ಪಂಚಾಯತ್, ಮಂಡಲ ಮತ್ತು ಲೋಕಸಭೆ ಕ್ಷೇತ್ರಮಟ್ಟದಲ್ಲಿ ಜನಮನ ಗೆಲ್ಲುವ ವಿವಿಧ ಕಾರ್ಯಚಟುವಟಿಕೆಗಳು ನಡೆಯಲಿವೆ. ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ವೃದ್ಧಿ, ಅವರ ಪ್ರಭಾವ ಬಳಸಿಕೊಂಡು ಜನರೊಂದಿಗೆ ನಿಕಟತೆ ಸಾಧಿಸಲಿದೆ. ರಾಜಕೀಯ ಕ್ಷೇತ್ರಗಳಿಗೆ ಹೊರತಾದ ಪ್ರಭಾವಿ ಪ್ರಮುಖರನ್ನು ಪ್ರಚಾರಕ್ಕೆ ಬಳಸಿಕೊಳ್ಳಲು ಪಕ್ಷ ಚಿಂತನೆ ನಡೆಸಿದೆ.

ಕೇಂದ್ರದ ಸಾಧನೆ, ಕೊಡುಗೆಗಳ ಬಗ್ಗೆ ವ್ಯಾಪಕ ಪ್ರಚಾರ, ಮನೆ ಮನೆಗೆ ಸಂಪರ್ಕ ಸಾಧಿಸಿ ಜನರ ಜತೆ ಸಂವಾದ ನಡೆಸಲಿದೆ. ಈ ಕಾರ್ಯಕ್ರಮಗಳಲ್ಲಿ ರಾಷ್ಟ್ರ ಹಾಗೂ ರಾಜ್ಯ ನಾಯಕರು ಪಾಲ್ಗೊಂಡು ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲಿದ್ದಾರೆ. ಎಲ್ಲ ಹಂತದ ಮುಖಂಡರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ವಿನೋದ್ ತಾವ್ಡೆ ಸಭೆಗೆ ತಿಳಿಸಿದರು ಎಂದು ಮೂಲಗಳು ಮಾಹಿತಿ ನೀಡಿವೆ.

ಸಭೆಯಲ್ಲಿ ಪಕ್ಷದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್, ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಪದಾಧಿಕಾರಿಗಳು ಹಾಜರಿದ್ದರು.

ಸಭೆಯ ನಂತರ ಸುದ್ದಿಗಾರರಿಗೆ ತಾವ್ಡೆ ಪ್ರತಿಕ್ರಿಯಿಸಿ, ಲೋಕಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪಂಚಾಯತ್‌ಮಟ್ಟದಿಂದ ಪಕ್ಷದ ಬಲವರ್ಧನೆ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಲು ವಿವಿಧ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.