ನ್ಯೂಸ್

ಇಡೀ ಜಗತ್ತಲ್ಲಿ ಉದ್ಯೋಗಿಗಳನ್ನ ಕಿತ್ತು ಹಾಕ್ತಾ ಇದ್ರೆ ಭಾರತದ ಸ್ಟಾರ್ಟ್​ಅಪ್​ನವರು ಕೆಲಸ ಕೊಡ್ತಾ ಇದಾರೆ..!

ನವದೆಹಲಿ: ಅಮೆರಿಕಾ ತನ್ನ ಫೆಡರಲ್​ ಬ್ಯಾಂಕ್​ನಲ್ಲಿ ಬಡ್ಡಿದರ ಏರಿಸುತ್ತಿದ್ದಂತೆಯೇ, ಜಗತ್ತಿನಾದ್ಯಂತ ಅನೇಕ ದೇಶಗಳ ಕರೆನ್ಸಿ ಬೆಲೆ ಕುಸಿಯತೊಡಗಿತ್ತು. ಇದು ಆರ್ಥಿಕ ಹಿಂಜರಿತದ ಮೊದಲ ಘಟ್ಟವಾಗಿ ಕಾಣಿಸಿಕೊಳ್ಳತೊಡಗಿತ್ತು. ಈಗ ಅನೇಕ ದೈತ್ಯ ಕಂಪೆನಿಗಳು ನಿತ್ಯವೂ ಮೆಲ್ಲಮೆಲ್ಲನೇ ನಷ್ಟದ ಕಡೆಗೆ ವಾಲುತ್ತಿವೆ. ಇದನ್ನು ಸರಿದೂಗಿಸಲು ಅವರು ತಮ್ಮ ಉದ್ಯೋಗಿಗಳನ್ನು​ ಕಿತ್ತು ಹಾಕುತ್ತಿದ್ದಾರೆ. ಅಮೇಜಾನ್​, ಟ್ವಿಟರ್​, ಫೇಸ್​ಬುಕ್​ ಮುಂತಾದ ಬೃಹತ್​ ಸಂಸ್ಥೆಗಳಲ್ಲಿ ಭಾರೀ ಪ್ರಮಾಣದಲ್ಲಿ ಉದ್ಯೋಗಿಗಳ ವಜಾ ನಡೆಯುತ್ತಿದೆ. ಈ ನಡುವೆ, ಭಾರತದಲ್ಲಿ ಅನೇಕ ಸ್ಟಾರ್ಟಪ್​ಗಳು ಜನರಿಗೆ ನೌಕರಿ ಕೊಡುತ್ತಿದ್ದಾರೆ!

ಈ ವರ್ಷ ಭಾರತದ ಸ್ಟಾರ್ಟಪ್‌ಗಳು ಸುಮಾರು 2,30,000 ಉದ್ಯೋಗಳನ್ನು ಸೃಷ್ಟಿಸಿವೆ ಎಂದು ಹಣಕಾಸು ಸೇವಾ ಸಂಸ್ಥೆ 'ಸೈಡ್‌ವನ್' ತನ್ನ ವರದಿಯಲ್ಲಿ ತಿಳಿಸಿದೆ.

ಸೈಡ್​ವನ್​ ವರದಿ ಪ್ರಕಾರ, 2017-22 ಅವಧಿಯಲ್ಲಿ ಸ್ಟಾರ್ಟಪ್‌ಗಳ ವಾರ್ಷಿಕ ಬೆಳವಣಿಗೆ ದರ (CAGR) ಶೇಕಡಾ 78ರಷ್ಟು ಹೆಚ್ಚಳವಾಗಿದೆ. 2022-27ರ ಅವಧಿಯಲ್ಲಿ ಶೇಕಡಾ 24ರಷ್ಟು ಹೆಚ್ಚಾಗಲಿದೆ. ಡಿಜಿಟಲ್ ಆರ್ಥಿಕತೆ ರೂಪಿಸುವ ನಿಟ್ಟಿಲ್ಲಿ ಕೇಂದ್ರ ಸರ್ಕಾರ ನೀಡುತ್ತಿರುವ ಪ್ರೋತ್ಸಾಹ, 2025ರ ವೇಳೆಗೆ ಜನರಿಗೆ ಉದ್ಯೋಗಾವಕಾಶವನ್ನು ಮತ್ತಷ್ಟು ಹೆಚ್ಚಿಸಲಿದೆ.

ಭಾರತದ ಸ್ಟಾರ್ಟಪ್ ವ್ಯವಸ್ಥೆ ಜಗತ್ತಿನಲ್ಲಿ ಮೂರನೇ ಸ್ಥಾನದಲ್ಲಿದೆ. ಅಮೆರಿಕ ಮತ್ತು ಚೀನಾ ಮೊದಲ ಎರಡು ಸ್ಥಾನಗಳಲ್ಲಿ ಇವೆ. ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಇಲಾಖೆಯ ಅಂಕಿ-ಅಂಶದ ಪ್ರಕಾರ, ದೇಶದಲ್ಲಿ 7,70,000 ಸ್ಟಾರ್ಟಪ್‌ಗಳಿವೆ. 108 ಯೂನಿಕಾರ್ನ್‌ಗಳನ್ನು ಒಳಗೊಂಡಂತೆ ದೇಶದ ಸ್ಟಾರ್ಟಪ್‌ಗಳ ಮೌಲ್ಯ ಸುಮಾರು 400 ಶತಕೋಟಿ ಡಾಲರ್ ಇದೆ.

'ಪಾಶ್ಚಾತ್ಯ ದೇಶಗಳಲ್ಲಿ ನಡೆಯುತ್ತಿರುವ ಆರ್ಥಿಕ ಹಿಂಜರಿತದಿಂದ ಭಾರತಕ್ಕೆ ಲಾಭವಾಗುತ್ತಿದೆ. ಈ ಸಮಯ, ಹೂಡಿಕೆದಾರರನ್ನು ಸೆಳೆಯಲು ಒಂದು ಉತ್ತಮ ಅವಕಾಶ. ದೇಶದಲ್ಲಿ ಸ್ಟಾರ್ಟಪ್‌ ವ್ಯವಸ್ಥೆ ಅನೇಕ ಅವಕಾಶಗಳ ಸೃಷ್ಟಿಗೆ ಪೂರಕವಾಗಿದೆ. ಇದು ಪರ್ಯಾಯ ಫಂಡಿಂಗ್ ಅಯ್ಕೆಗಳು, ಜಾಗತಿಕ ಮಾರುಕಟ್ಟೆ ವಿಸ್ತರಣೆ ಇತ್ಯಾದಿಗಳಿಗೆ ಅನುಕೂಲಕರವಾಗಿದೆ. ಇದರಿಂದ ಉದ್ಯೋಗ ಸೃಷ್ಟಿಯ ಸಾಮರ್ಥ್ಯವೂ ಹೆಚ್ಚಾಗಿದೆ' ಎಂದು ಸೈಡ್‌ವನ್ ಸಂಸ್ಥೆ ಸ್ಥಾಪಕ ಇಶ್‌ಪ್ರೀತ್ ಸಿಂಗ್ ಗಾಂಧಿ ಹೇಳಿದ್ದಾರೆ.