ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಮತ್ತು ಡಬ್ಲ್ಯುಎಚ್​ಒ ಮುಖ್ಯಸ್ಥ ಟೆಡ್ರೋಸ್ ಘಬ್ರಿಯೆಸೆಸ್ ಜತೆಗೆ ಪ್ರಧಾನಿ ನರೇಂದ್ರ ಮೋದಿ. 
ನ್ಯೂಸ್

ಜಾಗತಿಕ ಯುಗಕ್ಕೆ ಭಾರತದಲ್ಲಿ ನಾಂದಿ; ಸಾಂಪ್ರದಾಯಿಕ ಔಷಧಗಳ ಕೇಂದ್ರಕ್ಕೆ ಶಂಕು ಸ್ಥಾಪನೆ

Webdesk - Ravikanth

ಜಾಮ್ಗರ: ಗುಜರಾತ್​ನ ಜಾಮ್ಗರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್​ಒ) ಜಾಗತಿಕ ಸಾಂಪ್ರದಾಯಿಕ ಔಷಧಗಳ ಕೇಂದ್ರಕ್ಕೆ (ಜಿಸಿಟಿಎಂ) ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿದರು. ಈ ಕೇಂದ್ರವು ಮುಂದಿನ 25 ವರ್ಷಗಳಲ್ಲಿ ಸಾಂಪ್ರದಾಯಿಕ ಔಷಧಗಳ ಜಾಗತಿಕ ಯುಗಕ್ಕೆ ನಾಂದಿ ಹಾಡಲಿದೆ ಎಂದು ಮೋದಿ ಹೇಳಿದರು. ಮಾರಿಷಸ್ ಪ್ರಧಾನಿ ಪ್ರವಿಂದ ಕುಮಾರ್ ಜಗನ್ನಾಥ ಮತ್ತು ಡಬ್ಲ್ಯುಎಚ್​ಒ ಮಹಾ ನಿರ್ದೇಶಕ ಟೆಡ್ರೋಸ್ ಅಧಾನಂ ಘೇಬ್ರಿಯೆಸಸ್, ಭಾಗಿಯಾಗಿದ್ದರು.

ಏನಿದು ಜಿಸಿಟಿಎಂ?: ಜಿಸಿಟಿಎಂ ಎಂಬುದು ಪಾರಂಪರಿಕ ಔಷಧಗಳ ಜ್ಞಾನ ಕೇಂದ್ರ. ಆರೋಗ್ಯ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಸಾಂಪ್ರದಾಯಿಕ ಔಷಧಗಳ ಕೊಡುಗೆಯನ್ನು ಗರಿಷ್ಠಗೊಳಿ ಸಲು ಅಗತ್ಯವಾದ ಆವಿಷ್ಕಾರ ಮತ್ತು ತಂತ್ರಜ್ಞಾನ ಶೋಧ ಇದರ ಉದ್ದೇಶವಾಗಿದೆ. ಜಾಗತಿಕ ಮಟ್ಟದಲ್ಲಿ ಔಷಧ ತಯಾರಿಕೆಯಲ್ಲಿ ಮತ್ತು ಸಾಂಪ್ರಾದಾಯಿಕ ಮದ್ದಿನಲ್ಲಿ ಭಾರತ ಮುಂಚೂಣಿಯಲ್ಲಿರುವ ಕಾರಣ ಡಬ್ಲ್ಯುಎಚ್​ಒ ಸಹಕಾರದಲ್ಲಿ ಈ ಕೇಂದ್ರ ಭಾರತದಲ್ಲಿ ಸ್ಥಾಪನೆ ಆಗುತ್ತದೆ.

ನೀರವ್, ಮಲ್ಯ ವಿಷಯ ಪ್ರಸ್ತಾವ?: ಗುರುವಾರ ಭಾರತಕ್ಕೆ ಆಗಮಿಸಲಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಜತೆ ಚರ್ಚೆ ವೇಳೆ ಭಾರತದಿಂದ ತಲೆತಪ್ಪಿಸಿ ಕೊಂಡಿರುವ ಆರ್ಥಿಕ ಅಪರಾಧಿಗಳಾದ ವಿಜಯ್ ಮಲ್ಯ ಮತ್ತು ನೀರವ್ ಮೋದಿ ಹಸ್ತಾಂತರ ಕುರಿತು ಪ್ರಧಾನಿ ಮೋದಿ ರ್ಚಚಿಸುವ ಸಾಧ್ಯತೆ ಇದೆ.

ಹೈನೋದ್ಯಮದಲ್ಲಿ ಭಾರತ ನಂ.1: ಭಾರತ ಪ್ರತಿ ವರ್ಷ 8.50 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹಾಲನ್ನು ಉತ್ಪಾದಿಸುತ್ತಿದ್ದು ಜಗತ್ತಿನಲ್ಲೇ ದೊಡ್ಡ ಕ್ಷೀರ ಉತ್ಪಾದನೆ ದೇಶವಾಗಿ ಹೊರಹೊಮ್ಮಿದೆ. ಇದು ಗೋಧಿ ಮತ್ತು ಅಕ್ಕಿಯ ಒಟ್ಟು ವಹಿವಾಟಿಗಿಂತ ಹೆಚ್ಚಿನದ್ದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು. ಬನಸ್ಕಾಂತ ಜಿಲ್ಲೆಯ ದಿಯೋದರ್​ನಲ್ಲಿ ಬನಸ್ ಡೇರಿಯ ಹೊಸ ಸಂಕೀರ್ಣ ಮತ್ತು ಆಲೂಗಡ್ಡೆ ಸಂಸ್ಕರಣಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ಷೀರೋದ್ಯಮವನ್ನು ಅವಲಂಬಿಸಿದ ರೈತರಿಗೆ ಅತ್ಯಧಿಕ ಲಾಭವೂ ಆಗುತ್ತಿದೆ. ಆದರೆ, ದೊಡ್ಡ ಅರ್ಥಶಾಸ್ತ್ರಜ್ಞರು ಇದನ್ನು ನಿರ್ಲಕ್ಷಿಸಿದ್ದಾರೆ ಎಂದು ಪ್ರಧಾನಿ ವಿಷಾದ ವ್ಯಕ್ತಪಡಿಸಿದರು. ಬನಸ್ ಸಮುದಾಯ ರೇಡಿಯೊ ಕೇಂದ್ರ ಹಾಗೂ ಚೀಸ್ ಉತ್ಪನ್ನಗಳ ಉತ್ಪಾದನೆಯ ವಿಸ್ತರಣಾ ಘಟಕ, ಪಾಲನ್​ಪುರದಲ್ಲಿ ಹಾಲು ಪುಡಿ ಘಟಕ ಹಾಗೂ ಡಾಮಾದಲ್ಲಿ ಜೈವಿಕ ಅನಿಲ ಸ್ಥಾವರವನ್ನು ಉದ್ಘಾಟಿಸಿದರು.

2023ರನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಿಸುವ ಭಾರತದ ಪ್ರಸ್ತಾವನೆ ಅಂಗೀಕರಿಸಿದ ವಿಶ್ವಸಂಸ್ಥೆಗೆ ಕೃತಜ್ಞತೆಗಳು | ನರೇಂದ್ರ ಮೋದಿ ಪ್ರಧಾನಿ