ಕೆ.ಆರ್.ನಗರ: ಲಾಕ್‌ಡೌನ್‌ನಿಂದಾಗಿ ಸಂಚಾರ ಸ್ಥಗಿತಗೊಳಿಸಿದ್ದ ಸರ್ಕಾರಿ ಬಸ್‌ಗಳು, ಇದೀಗ ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಸಂಚಾರ ಮಾಡಲಿವೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮದ ಕೆ.ಆರ್.ನಗರ ಘಟಕ ವ್ಯವಸ್ಥಾಪಕ ಪಾಪನಾಯಕ ಹೇಳಿದರು.
ಗ್ರಾಮೀಣ ಪ್ರದೇಶಕ್ಕೆ ಬಸ್ ಸಂಚಾರಕ್ಕೆ ಚಾಲನೆ ನೀಡುವ ಮುನ್ನ ಪಟ್ಟಣದ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಜನರಿಗೂ ಸಾರಿಗೆ ಸೇವೆ ಒದಗಿಸುವ ದೃಷ್ಟಿಯಿಂದ ತಾಲೂಕಿನಾದ್ಯಾಂತ ಬಸ್ ಬಿಡಲಾಗಿದೆ ಎಂದು ತಿಳಿಸಿದರು.
ಸದ್ಯಕ್ಕೆ ಎಲ್ಲ ಗ್ರಾಮಕ್ಕೂ ಒಂದೊಂದು ಟ್ರಿಪ್ ಬಿಡಲಾಗುವುದು. ಜನ ಹೆಚ್ಚಾಗಿರುವ ಕಡೆಗೆ ಹೆಚ್ಚಿನ ಸಂಚಾರ ಆರಂಭಿಸಲಾಗುವುದು. ನಮ್ಮ ಘಟಕದಲ್ಲಿ ಸಾಮಾನ್ಯ ಮತ್ತು ವೇಗದೂತ ಸೇರಿದಂತೆ 50 ಬಸ್‌ಗಳು ಸಂಚರಿಸಲಿವೆ. ಕೆ.ಆರ್.ನಗರ-ಹುಣಸೂರು, ಸಾಲಿಗ್ರಾಮ, ಎಲೆಮನುಗನಹಳ್ಳಿ, ಕಿತ್ತೂರು, ಪಿರಿಯಾಪಟ್ಟಣ, ಮೂಲೆಪೆಟ್ಲು, ದೆಗ್ಗನಹಳ್ಳಿ, ಕಲ್ಲಹಳ್ಳಿ, ಸಂಗಾಪುರ ಮತ್ತು ಬೆಟ್ಟದಪುರ ಮಾರ್ಗಗಳಿಗೆ ಬಸ್ ಬಿಡಲಾಗಿದೆ ಎಂದರು.
ನಿಲ್ದಾಣಗಳಲ್ಲಿ ಪ್ರಯಾಣಿಕರ ಆರೋಗ್ಯವನ್ನು ತಪಾಸಣೆ ಮಾಡಲಾಗುವುದು. ಅಲ್ಲದೆ ಮಾರ್ಗಮಧ್ಯೆ ಹತ್ತುವವರನ್ನು ಮುಂದಿನ ನಿಲ್ದಾಣದಲ್ಲಿ ತಪಾಸಣೆಗೊಳಪಡಿಸಲಾಗುವುದು. ಇರುವ ಸೌಲಭ್ಯವನ್ನು ಬಳಸಿಕೊಂಡು ಸಾರ್ವಜನಿಕರಿಗೆ ಸೇವೆ ಒದಗಿಸಲಾಗುವುದು. ಇದಕ್ಕೆ ಪ್ರಯಾಣಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.