ಸುದ್ದಿಗೋಷ್ಠಿಯಲ್ಲಿ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿದರು. ಕೆ.ಎನ್.ರಾಮಕೃಷ್ಣ, ಕಡಿದಾಳ್ ಗೋಪಾಲ್ ಮುಂತಾದವರಿದ್ದರು. 
ನ್ಯೂಸ್

ಕ್ಯಾನ್ಸರ್ ಆಸ್ಪತ್ರೆ ಕಾಮಗಾರಿ ಆರಂಭಿಸಿ: ಕೆಬಿಪಿ ಆಗ್ರಹ

ಶಿವಮೊಗ್ಗ: ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಸಹಯೋಗದಲ್ಲಿ ಮೆಗ್ಗಾನ್ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕ್ಯಾನ್ಸರ್ ಆಸ್ಪತ್ರೆಗೆ ಭೂಮಿ ಪೂಜೆ ನಡೆದು ಎಂಟು ತಿಂಗಳಾದರೂ ಕಾಮಗಾರಿ ಆರಂಭವಾಗಿಲ್ಲ ಎಂದು ಜೆಡಿಎಸ್ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಬಡ ರೋಗಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕ್ಯಾನ್ಸರ್ ಆಸ್ಪತ್ರೆ ಆರಂಭಕ್ಕೆ ನಿರ್ಧರಿಸಲಾಗಿತ್ತು. ಆಸ್ಪತ್ರೆ ನಿರ್ಮಾಣವಾಗುವವರೆಗೂ ಮೆಗ್ಗಾನ್‌ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಹಾಗೂ ಪೆಟ್ ಸ್ಕಾೃನಿಂಗ್ ಆರಂಭಕ್ಕೆ ಕ್ರಮ ಕೈಗೊಳ್ಳಬೇಕೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಕ್ಯಾನ್ಸರ್ ಆಸ್ಪತ್ರೆ ಕಾಮಗಾರಿ ಬಗ್ಗೆ ಸಿಮ್ಸ್ ನಿರ್ದೇಶಕರನ್ನು ಪ್ರಶ್ನಿಸಿದರೆ, ಕೆಲವರು ಆಸ್ಪತ್ರೆ ನಿರ್ಮಾಣದ ವಿರುದ್ಧ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ ಎನ್ನುತ್ತಾರೆ. ಇದರಿಂದ ನಷ್ಟವಾಗುತ್ತಿರುವುದು ಬಡ ರೋಗಿಗಳಿಗೆ. ದುಬಾರಿ ಚಿಕಿತ್ಸೆ ಭರಿಸಲಾಗದೆ ಪರಿತಪಿಸುವಂತಾಗಿದೆ ಎಂದರು.
ಗೋಪಶೆಟ್ಟಿಕೊಪ್ಪ ಮತ್ತು ಗೋವಿಂದಾಪುರದಲ್ಲಿ ಸುಮಾರು 4 ಸಾವಿರ ಮನೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಗುತ್ತಿಗೆದಾರರಿಗೆ 128 ಕೋಟಿ ರೂ. ಸಂದಾಯವಾಗಿದೆ. 300 ಮನೆಗಳನ್ನಷ್ಟೇ ಫಲಾನುಭವಿಗಳಿಗೆ ಇದುವರೆಗೆ ನೀಡಲಾಗಿದೆ. ಇನ್ನೂ 8 ಕೋಟಿ ರೂ. ನೀಡುವಂತೆ ಗುತ್ತಿಗೆದಾರರು ಕೋರಿದ್ದಾರೆ. ಇದಕ್ಕೆ ಪಾಲಿಕೆಯಲ್ಲಿ ಹಣವಿಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಅನುದಾನ ನೀಡಬೇಕೆಂದು ಕೆ.ಬಿ.ಪ್ರಸನ್ನಕುಮಾರ್ ಒತ್ತಾಯಿಸಿದರು.
ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಭೂಗತ ಕೇಬಲ್ ಅಳವಡಿಕೆ ಕಾರ್ಯ ಸಮರ್ಪಕವಾಗಿಲ್ಲ. ಈ ಬಗ್ಗೆ ತನಿಖಾ ಸಮಿತಿ ರಚನೆಯಾಗಿದ್ದರೂ ಪ್ರಯೋಜನವಾಗಿಲ್ಲ. ಈಗ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ. ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ನಗರಾಧ್ಯಕ್ಷ ದೀಪಕ್ ಸಿಂಗ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ಸತೀಶ್, ಪ್ರಮುಖರಾದ ಕೆ.ಎನ್.ರಾಮಕೃಷ್ಣ, ಸಿದ್ದಪ್ಪ, ಬೊಮ್ಮನಕಟ್ಟೆ ಮಂಜುನಾಥ್, ದಯಾನಂದ್, ಅಬ್ದುಲ್ ವಾಜೀದ್, ಎಚ್.ಎಂ.ಸಂಗಯ್ಯ, ನರಸಿಂಹ ಗಂಧದಮನೆ, ನಾಗೇಶ್, ನಿಖಿಲ್, ಕಾಂತರಾಜ್, ಸುನೀಲ್‌ಗೌಡ, ವೆಂಕಟೇಶ್ ಸುದ್ದಿಗೋಷ್ಠಿಯಲ್ಲಿದ್ದರು.