ನ್ಯೂಸ್

ಕೆಲಸಕ್ಕಾಗಿ ನಿತ್ಯ 1600 ಕಿ.ಮೀ. ಪ್ರಯಾಣಿಸುವ ಪ್ರತಿಷ್ಟಿತ ಕಂಪನಿಯ ಸಿಇಒ; ವೇತನ ಕೇಳಿದ್ರೆ ಅಬ್ಬಬ್ಬಾ ಅಂತೀರಾ!

ವಾಷಿಂಗ್ಟನ್​ಡಿಸಿ: ನಾವು ಒಂದು ದಿನಕ್ಕೆ ಎಷ್ಟು ಕಿಲೋಮೀಟರ್​ ಪ್ರಯಾಣಿಸಬಹುದು. ಯಾವಾಗಲೋ ಒಂದು ಬಾರಿ ದೂರದೂರಿಗೆ ಹೋಗಿ ಬಂದರೆ ಸಾಕು.. ಅಯ್ಯೋ ಆಯಾಸವಾಗುತ್ತಿದೆ ಎಂಬ ಭಾವನೆ ನಮ್ಮಲ್ಲಿರುತ್ತದೆ. ಕೆಲಸಕ್ಕೆ ಎಂದರೆ ಅಂದಾಜು ಎಷ್ಟು ದೂರ ಪ್ರಯಾಣ ಮಾಡಬಹುದು. 5 ಕಿ.ಮೀ., 10 ಕಿ.ಮೀ. ಅಥವಾ ಹೆಚ್ಚೆಂದರೆ 20 ಕಿ.ಮೀ. ಪ್ರಯಾಣ ಮಾಡುತ್ತೇವೆ. ಆದರೆ ಸ್ಟಾರ್​ಬಕ್ಸ್​​ನ ನೂತನ ಸಿಇಒ ಬ್ರಿಯಾನ್​ ನಿಕೋಲ್ ಅವರ​ ವಿಚಾರವೇ ಬೇರೆ. ಇವರು ತಮ್ಮ ಮನೆಯಿಂದ ಕಚೇರಿಗೆ ಪ್ರತಿದಿನ 1600 ಕಿಲೋಮೀಟರ್​ ಪ್ರಯಾಣಿಸುತ್ತಾರೆ.

ಹೌದು, ಬ್ರಿಯಾನ್​ ಅವರು ತಮ್ಮ ಪ್ರಯಾಣಕ್ಕಾಗಿ ಕಾರ್ಪೊರೇಟ್ ಜೆಟ್ ಅನ್ನು ಬಳಸುತ್ತಾರೆ. ಇವರ ಪ್ರಯಾಣದ ವೆಚ್ಚವನ್ನು ಕಂಪನಿಯು ಭರಿಸುತ್ತದೆ. ಬ್ರಿಯಾನ್ ಅವರ ಮನೆ ಕ್ಯಾಲಿಫೋರ್ನಿಯಾದ ನ್ಯೂಪೋರ್ಟ್‌ನಲ್ಲಿದ್ದರೆ, ಸ್ಟಾರ್‌ಬಕ್ಸ್‌ನ ಪ್ರಧಾನ ಕಚೇರಿಯು ವಾಷಿಂಗ್ಟನ್‌ನ ಸಿಯಾಟಲ್‌ನಲ್ಲಿದೆ. ಎರಡು ನಗರಗಳ ನಡುವಿನ ಅಂತರ(ವಾಯುಮಾರ್ಗ) ಸುಮಾರು 1600 ಕಿ.ಮೀ. ಇದೆ. ಬ್ರಿಯಾನ್ ಪ್ರತಿದಿನ ಕಂಪನಿಗೆ ಹೋಗುವುದು ಹಾಗೂ ಕಂಪನಿಯ ಕೆಲಸಕ್ಕಾಗಿ ಇತರ ನಗರಗಳು ಮತ್ತು ದೇಶಗಳಿಗೆ ಪ್ರಯಾಣಿಸುವ ವೆಚ್ಚವನ್ನು ಕಂಪನಿಯು ಭರಿಸುತ್ತದೆ.

ಬ್ರಿಯಾನ್​(50) ಅವರ ವೇತನದ ಬಗ್ಗೆ ಹೇಳುವುದಾದ್ರೆ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಸಂಬಳ ಪಡೆಯುತ್ತಾರೆ. ನೂತನ ಸಿಇಒಗೆ ಸ್ಟಾರ್‌ಬಕ್ಸ್ 113 ಮಿಲಿಯನ್ ಡಾಲರ್​​ ವೇತನ ನೀಡಲಿದೆ. ಬ್ರಿಯಾನ್​ ಅವರ ಮೂಲ ವೇತನ 1.6 ಮಿಲಿಯನ್​ ಡಾಲರ್​, ಇದರ ಜತೆಗೆ ಬ್ರಿಯಾನ್ ನಿಕೋಲ್ ಅವರು ಕೆಲಸದ ಆಧಾರದ ಮೇಲೆ ಪ್ರತಿ ವರ್ಷ 3.6 ಮಿಲಿಯನ್​​ ಡಾಲರ್​ನಿಂದ 7.2 ಮಿಲಿಯನ್ ಡಾಲರ್​​ ಬೋನಸ್ ಪಡೆಯುತ್ತಾರೆ. ಇದು ಅವರ ಮೂಲ ವೇತನಕ್ಕಿಂತ ನಾಲ್ಕು ಪಟ್ಟು ಹೆಚ್ಚಿದೆ. ಜತೆಗೆ ಕಂಪನಿಯ ಷೇರುಗಳಲ್ಲಿ ಪಾಲನ್ನು ಹೊಂದಿದ್ದಾರೆ. ಷೇರಿನಿಂದ ವಾರ್ಷಿಕವಾಗಿ 23 ಮಿಲಿಯನ್ ಡಾಲರ್​ ಪಡೆಯುತ್ತಾರೆ. ಅಂದ್ಹಾಗೆ ಈ ಮೊದಲು ಸ್ಟಾರ್​ಬಕ್ಸ್​​ನ ಸಿಇಒ ಸ್ಥಾನದಲ್ಲಿ ಭಾರತೀಯ ಮೂಲದ ಲಕ್ಷ್ಮಣ್ ನರಸಿಂಹನ್ ಅವರಿದ್ದರು. ಬದಲಾವಣೆ ಬಳಿಕ ಪ್ರಸ್ತುತ ಬ್ರಿಯಾನ್​ ನಿಕೋಲ್​​ ಸಿಇಒ ಸ್ಥಾನದಲ್ಲಿದ್ದಾರೆ.(ಏಜೆನ್ಸೀಸ್​​)