V Senthil Balaji: ಸೆ. 27ರಂದು ಕರೂರಿನಲ್ಲಿ ನಡೆದ ಕಾಲ್ತುಳಿತ ದುರಂತಕ್ಕೆ ಸಂಬಂಧಪಟ್ಟಂತೆ ಟಿವಿಕೆ ಮುಖ್ಯಸ್ಥ ಮತ್ತು ನಟ ವಿಜಯ್ ಆರೋಪಕ್ಕೆ ಸಂಬಂಧಿಸಿದಂತೆ ಕರೂರು ಜಿಲ್ಲೆಯ ಡಿಎಂಕೆಯ ಪ್ರಭಾವಿ ನಾಯಕ ಮತ್ತು ಶಾಸಕ ವಿ.ಸೆಂಥಿಲ್ ಬಾಲಾಜಿ ಸುದ್ದಿಗೋಷ್ಠಿ ನಡೆಸಿ ತಮ್ಮ ವಿರುದ್ಧದ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಬುಧವಾರ(ಸೆ. 01) ಕರೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಸೆಂಥಿಲ್ ಬಾಲಾಜಿ, ಕಾಲ್ತುಳಿತ ಘಟನೆಯು ಅತ್ಯಂತ ಕ್ರೂರ ಮತ್ತು ಸ್ವೀಕಾರಾರ್ಹವಲ್ಲದ ದುರಂತ. ಇದು ಯಾವುದೇ ಸಂದರ್ಭದಲ್ಲೂ ಆದರೆ ವಿಜಯ್ ಅವರ ಟಿವಿಕೆ ಪಕ್ಷ ಪೊಲೀಸರು ನಿಗದಿ ಪಡಿಸಿದ ಷರತ್ತುಗಳನ್ನು ಮತ್ತು ವೇಳಾಪಟ್ಟಿಯನ್ನು ಪಾಲಿಸಿದ್ದರೆ, 41 ಜನ ಮೃತಪಟ್ಟ ಘಟನೆಯನ್ನು ತಪ್ಪಿಸಬಹುದಿತ್ತು ಎಂದು ಹೇಳಿದ್ದಾರೆ.
ಕರೂರಿನಲ್ಲಿ ಮಾತ್ರ ಯಾಕೆ ಕಾಲ್ತುಳಿತ ಸಂಭವಿಸಿತು. ಹಿಂದೆ ನಡೆದ ರ್ಯಾಲಿಗಳಲ್ಲಿ ಯಾಕೆ ಸಂಭವಿಸಲಿಲ್ಲ ಎಂಬ ವಿಜಯ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅವರು, ಟಿವಿಕೆ ಮೊದಲು ಸಭೆಗೆ ವಿನಂತಿಸಿದ ಸ್ಥಳಗಳು ಲೈಟ್‌ಹೌಸ್ ಕಾರ್ನರ್ ಮತ್ತು ಉಜಾವರ್ ಸಂಧೈ. ಆದರೆ ನಿರೀಕ್ಷಿತ ಜನಸಂದಣಿಯನ್ನು ಪೂರೈಸಲು ಲಭ್ಯವಿರುವ ಏಕೈಕ ಸ್ಥಳ ವೇಲುಸಾಮಿಪುರಂ, ಅಲ್ಲೇ ಸಭೆಗೆ ಅವಕಾಶ ನೀಡಲಾಗಿದೆ ಎಂದರು.
ಸಾಮಾನ್ಯವಾಗಿ, ಒಂದು ರಾಜಕೀಯ ಪಕ್ಷವು ಸಾರ್ವಜನಿಕ ಸಭೆ ನಡೆಸುವಾಗ, ಸ್ಥಳವು ನಿರೀಕ್ಷಿತ ಜನಸಂದಣಿಗೆ ಹೊಂದಿಕೆಯಾಗಬೇಕು. ಡಿಎಂಕೆಯ 'ಮುಪ್ಪೆರುಮ್ ವಿಝಾ'ವನ್ನು ಆಯೋಜಿಸಿದಾಗ, ನಾವು ಎರಡು ಲಕ್ಷ ಕಾರ್ಯಕರ್ತರಿಗೆ ವಸತಿ ಕಲ್ಪಿಸಲು ಖಾಸಗಿ ಭೂಮಿಯನ್ನು ವ್ಯವಸ್ಥೆ ಮಾಡಿದ್ದೇವೆ. ಕುಡಿಯುವ ನೀರು ಮತ್ತು ತಿಂಡಿಗಳನ್ನು ಒದಗಿಸಿದ್ದೇವೆ. ಆದರೆ ಟಿವಿಕೆ ಸಭೆ ನಡೆದ ಸ್ಥಳದಲ್ಲಿ ಸಾವಿರಾರು ಚಪ್ಪಲಿಗಳು ಕಂಡುಬಂದವು, ಆದರೆ ಯಾರಿಗೂ ಒಂದೇ ಒಂದು ಬಾಟಲಿ ನೀರನ್ನು ಸಹ ಒದಗಿಸಿರಲಿಲ್ಲ ಎಂದು ತಿಳಿಸಿದ್ದಾರೆ.
ಕಾಲ್ತುಳಿತದ ಘಟನೆಯನ್ನು ರಾಜಕೀಯವಾಗಿ ನೋಡಲು ನಾನು ಬಯಸುವುದಿಲ್ಲ. ಯಾರನ್ನೂ ದೂಷಿಸುವ ಬದಲು, ಇದು ಮತ್ತೆ ಸಂಭವಿಸದಂತೆ ತಡೆಯಲು ಪ್ರಯತ್ನಿಸಬೇಕು. ಸಾಕಷ್ಟು ಟ್ರಾಫಿಕ್ ಇದ್ದ ಕಾರಣ ಪೊಲೀಸರು ವಿಜಯ್ ಅವರ ವಾಹನವನ್ನು ಮೊದಲೇ ನಿಲ್ಲಿಸುವಂತೆ ಕೇಳಿಕೊಂಡರು. ಅವರನ್ನು ನೋಡಲು ಜನಸಮೂಹ ಅವರನ್ನು ಹಿಂಬಾಲಿಸಿತು. ವಿಜಯ್ ಮಾತನಾಡಲು ಪ್ರಾರಂಭಿಸುವ ಮೊದಲೇ ಪರಿಸ್ಥಿತಿ ಹದಗೆಟ್ಟಿತ್ತು ಎಂದು ಹೇಳಿದ್ದಾರೆ.
ವಿಜಯ್ ಮೇಲೆ ಚಪ್ಪಲಿ ಎಸೆದಿದ್ದಕ್ಕೆ ಪ್ರತಿಕ್ರಿಯಿಸಿದ ಸೆಂಥಿಲ್ ಬಾಲಾಜಿ, ಜನಸಂದಣಿಯಲ್ಲಿದ್ದ ಅನೇಕ ಜನರು ಮೂರ್ಛೆ ಹೋಗಿದ್ದರು. ಈ ವೇಳೆ ವಿಜಯ್ ಗಮನ ಸೆಳೆಯಲು ಯಾರಾದರೂ ಶೂ ಎಸೆದಿರಬಹುದು. ನನ್ನ ಬಗ್ಗೆ ಮಾತನಾಡಿದ್ದಕ್ಕೆ ಶೂ ಎಸೆದಿಲ್ಲ. ವಿಜಯ್ ಅವರು ಮಾತನಾಡಲು ಶುರು ಮಾಡಿದ 6ನೇ ನಿಮಿಷಕ್ಕೆ ಅವರ ಮೇಲೆ ಚಪ್ಪಲಿ ಎಸೆಯಲಾಗಿದೆ. ಅವರು ನನ್ನ ಬಗ್ಗೆ ಮಾತನಾಡಿದ್ದಕ್ಕೆ ಅಲ್ಲ. ಅವರ ಭಾಷಣದ 16ನೇ ನಿಮಿಷದಲ್ಲಿ ನನ್ನ ವಿರುದ್ದ ಮಾತನಾಡಿದ್ದಾರೆ. ಆದರೆ ನನ್ನ ವಿರುದ್ದ ಮಾತನಾಡಿದ್ದಕ್ಕೆ ಚಪ್ಪಲಿ ಎಸೆಯಲಾಯಿತು ಎಂದು ಸುಳ್ಳು ಸುದ್ದಿ ಹರಡಲಾಗ್ತಿದೆ ಎಂದು ಸ್ಪಷ್ಟಪಡಿಸಿದರು.
ಘಟನೆ ನಡೆದ ತಕ್ಷಣ ಅಷ್ಟು ಬೇಗ ಹೇಗೆ ಆಸ್ಪತ್ರೆಗೆ ದೌಡಾಯಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆ ಸಮಯದಲ್ಲಿ ನಾನು ಕರೂರ್ ಜಿಲ್ಲಾ ಡಿಎಂಕೆ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದೆ. ಘಟನೆಯ ಬಗ್ಗೆ ತಿಳಿದ ತಕ್ಷಣ, ನಾನು ಅಮರಾವತಿ ಆಸ್ಪತ್ರೆಗೆ ಧಾವಿಸಿದೆ. ಎಲ್ಲಾ ಪಕ್ಷಗಳ ಸದಸ್ಯರು ಆಸ್ಪತ್ರೆಗಳಲ್ಲಿದ್ದರು. ದುರಂತದ ಬಗ್ಗೆ ಕೇಳಿದ ಬಳಿಕ ಯಾರಾದರೂ ಚೆನ್ನೈಗೆ ಓಡಿಹೋಗಲು ಸಾಧ್ಯವೇ? ಎಂದು ವಿಜಯ್ ಚೆನ್ನೈಗೆ ತೆರಳಿದ್ದಕ್ಕೆ ಪರೋಕ್ಷವಾಗಿ ಟೀಕಿಸಿದ್ದಾರೆ.
ಇದು ರಾಜಕೀಯವಲ್ಲ. ನಾವು ನಮ್ಮ ಪಕ್ಷದ ನಾಯಕರ ಆದೇಶದಂತೆ ನಡೆದುಕೊಂಡಿದ್ದೇವೆ. ಯಾವುದೇ ರಾಜಕೀಯ ನಾಯಕರು ಜೀವಹಾನಿಯನ್ನು ಒಪ್ಪಿಕೊಳ್ಳುವುದಿಲ್ಲ. ನಾವು ಸಹಾಯ ಮಾಡಲು ಹೋಗಿದ್ದೆವು. ನಮ್ಮನ್ನು ಟೀಕಿಸುವವರು ನಾವು ಮಾಡಿದ್ದನ್ನು ಮಾಡಬೇಕಿತ್ತು ಎಂದು ಹೇಳಿದ್ದಾರೆ.
ಇದೇ ವೇಳೆ ಬಿಜೆಪಿ ಸಂಸದರ ಕರೂರ್ ಭೇಟಿಯನ್ನು ಟೀಕಿಸಿದ ಅವರು, ಸಾವು ನೋವುಗಳ ನಂತರ ಅವರು ಮಣಿಪುರ ಅಥವಾ ಕುಂಭಮೇಳಕ್ಕೆ ಯಾಕೆ ಹೋಗಲಿಲ್ಲ? ಎಂದು ಕಿಡಿಕಾರಿದರು. (ಏಜೆನ್ಸೀಸ್)