ನ್ಯೂಸ್

ಬಾಬಾ ಸಿದ್ಧೇಶ್ವರ ದೇವಾಲಯದಲ್ಲಿ ಕಾಲ್ತುಳಿತ: 7 ಭಕ್ತರು ಸಾವು! 35 ಜನರ ಸ್ಥಿತಿ ಗಂಭೀರ

ಪಾಟ್ನಾ: ಪ್ರತಿವರ್ಷ ಶ್ರಾವಣ ಮಾಸದಲ್ಲಿ ಅದ್ಧೂರಿಯಾಗಿ ನಡೆಯುವ ಬರಾವರ್ ಬೆಟ್ಟದ ಪವಿತ್ರ ಬಾಬಾ ಸಿದ್ಧೇಶ್ವರ ದೇವಾಲಯದ ಮಹಾಮಸ್ತಕಾಭಿಷೇಕ ಪೂಜಾ ಕಾರ್ಯಕ್ರಮವನ್ನು ಈ ಬಾರಿಯೂ ವಿಶೇಷವಾಗಿ ಏರ್ಪಡಿಸಲಾಗಿತ್ತು. ಎಂದಿನಂತೆ ಹರಿದುಬರುವ ಭಕ್ತಸಾಗರವನ್ನು ನಿಯಂತ್ರಿಸುವಲ್ಲಿ ತೊಡಗಿದ್ದ ಎನ್​ಸಿಸಿ ಸ್ವಯಂಸೇವಕರು, ಜನರ ನೂಕುನುಗ್ಗಲು ಹಚ್ಚುತ್ತಿದ್ದಂತೆ ಏಕಾಏಕಿ ಲಾಠಿ ಪ್ರಹಾರ ನಡೆಸಿದ್ದಾರೆ. ಈ ವೇಳೆ ಕಾಲ್ತುಳಿತ ಉಂಟಾಗಿದೆ.  ಘಟನೆಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, 35ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆ ಬಗ್ಗೆ ಮಾಹಿತಿ ಪಡೆದ ಜೆಹಾನಾಬಾದ್‌ನ ಟೌನ್ ಇನ್ಸ್‌ಪೆಕ್ಟರ್ ದಿವಾಕರ್ ಕುಮಾರ್ ವಿಶ್ವಕರ್ಮ, ಏಳು ಜನರ ಮೃತದೇಹಗಳನ್ನು ಜೆಹಾನಾಬಾದ್ ಪೋಸ್ಟ್ ಮಾರ್ಟಮ್ ಕೊಠಡಿಗೆ ರವಾನಿಸಿ, ವಿಚಾರಣೆ ಕೈಗೊಂಡಿದ್ದಾರೆ. ಕಾಲ್ತುಳಿತದಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರು ಆಸ್ಪತ್ರೆಯ ಮುಂದೆ ಕಣ್ಣೀರಿಟ್ಟಿದ್ದು, ಗಂಭೀರವಾಗಿ ಗಾಯಗೊಂಡ 35 ಮಂದಿಯನ್ನು ಹತ್ತಿರದ ಮಖದಮ್​ಪುರ ಮತ್ತು ಸದರ್​ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ.

ಪೊಲೀಸ್ ಆಡಳಿತದ ನಿರ್ಲಕ್ಷ್ಯವೇ ನಮ್ಮವರ ಸಾವಿಗೆ ಕಾರಣ ಎಂದು ದೂರಿದ ಮೃತರ ಕುಟುಂಬದ ಸದಸ್ಯರು, "ಆಡಳಿತದ ವ್ಯವಸ್ಥೆಗಳ ಕೊರತೆಯಿಂದಾಗಿ ನೂಕುನುಗ್ಗಲು ಉಂಟಾಯಿತು. ಕೆಲವು ಎನ್‌ಸಿಸಿ (ನ್ಯಾಷನಲ್ ಕೆಡೆಟ್ ಕಾರ್ಪ್ಸ್) ಸ್ವಯಂಸೇವಕರು ಜನಸಂದಣಿ ನಿಯಂತ್ರಿಸುವಲ್ಲಿ ವಿಫಲರಾದರು. ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತಾಧಿಗಳ ಮೇಲೆ ಇವರು ನಡೆಸಿದ ಏಕಾಏಕಿ ಲಾಠಿ ಪ್ರಹಾರವೇ ಕಾಲ್ತುಳಿತಕ್ಕೆ ಕಾರಣ ಎಂದು ಆರೋಪಿಸಿದರು. ಮೃತರ ಸಂಖ್ಯೆ ಇನ್ನು ಹೆಚ್ಚಾಗಬಹುದು ಎಂಬ ಸುದ್ದಿ ವರದಿಯಾಗಿದ್ದು, ಭಕ್ತರ ಆತಂಕ ಮತ್ತಷ್ಟು ಹೆಚ್ಚಿದೆ,(ಏಜೆನ್ಸೀಸ್).