ಚೆನ್ನೈ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯು(SIR) ಮತಗಳನ್ನು ಕದಿಯುವ ಪಿತೂರಿ ಪ್ರಕ್ರಿಯೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಭಾನುವಾರ (ನ.9) ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಇದು ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ತಪ್ಪಾಗಿ ಅಳಿಸಿಹಾಕಲು ಕಾರಣವಾಗಬಹುದು ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಪಚ್ಮರಿಯಲ್ಲಿ ಮಾತನಾಡಿದ ತಮಿಳುನಾಡು ಸಿಎಂ, ಮತ ಕಳ್ಳತನದ ಪಿಡುಗು ಈಗ ನಮ್ಮ ಮನೆ ಬಾಗಿಲಿಗೆ ತಲುಪಿದೆ. ನಾವು ಇದರ ವಿರುದ್ಧ ಒಟ್ಟಾಗಿ ಹೋರಾಡಬೇಕು. ಅಲ್ಲದೆ, ಸರಿಯಾದ ಮತ್ತು ಪಾರದರ್ಶಕ ಮತದಾರರ ಪಟ್ಟಿಯು ಪ್ರಾಮಾಣಿಕ ಚುನಾವಣೆಗಳ ಅಡಿಪಾಯವಾಗಿದೆ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಸ್ಟಾಲಿನ್, ನಾವು ಸುಧಾರಣೆಗಳನ್ನು ವಿರೋಧಿಸುವುದಿಲ್ಲ, ಆದರೆ ಸಾಕಷ್ಟು ಸಮಯ ಮತ್ತು ಪಾರದರ್ಶಕತೆ ಇಲ್ಲದೆ ಜಾರಿಗೆ ತರಲಾದ ಈ ಪ್ರಕ್ರಿಯೆಯು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ. ಅಲ್ಲದೆ, ಮಿತ್ರಪಕ್ಷಗಳೊಂದಿಗೆ ಚರ್ಚಿಸಿದ ನಂತರ, ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಯಿತು ಮತ್ತು ನವೆಂಬರ್ 11 ರಂದು ರಾಜ್ಯಾದ್ಯಂತ ಪ್ರತಿಭಟನೆಯನ್ನು ಘೋಷಿಸಲಾಯಿತು ಎಂದಿದ್ದಾರೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಈ ಪ್ರಕ್ರಿಯೆಯನ್ನು ವಿರೋಧಿಸುತ್ತಿದ್ದಾರೆ ಎಂದು ಸ್ಟಾಲಿನ್ ತಿಳಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ನಮ್ಮ ವಿರೋಧಿ; ಚುನಾವಣೆ ಬಳಿಕವೂ ಯಾವುದೇ ಮೈತ್ರಿಕೂಟ ಸೇರಲ್ಲ; ಪ್ರಶಾಂತ್ ಕಿಶೋರ್| Prashant Kishor
SIR ಫಾರ್ಮ್‌ನಲ್ಲಿರುವಗೊಂದಲಮಯ ಪ್ರಶ್ನೆಗಳನ್ನು ಸ್ಟಾಲಿನ್ ಟೀಕಿಸಿದ್ದು, ಫಾರ್ಮ್ ಮೂರು ಬಾರಿ ಸಂಬಂಧಿಕರ ಹೆಸರನ್ನು ಕೇಳುತ್ತದೆ. ಆದರೆ ಯಾವ ಸಂಬಂಧಿಯನ್ನು ಉಲ್ಲೇಖಿಸಲಾಗುತ್ತಿದೆ ಎಂಬುದನ್ನು ಅದು ನಿರ್ದಿಷ್ಟಪಡಿಸುವುದಿಲ್ಲ. ಸಣ್ಣ ತಪ್ಪು ಕೂಡ ಮತದಾರರ ಹೆಸರನ್ನು ತೆಗೆದುಹಾಕಲು ಕಾರಣವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಬ್ಲಾಕ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಅನೇಕ ಸ್ಥಳಗಳಲ್ಲಿ ಫಾರ್ಮ್‌ಗಳು ಲಭ್ಯವಿಲ್ಲ ಎಂದು ಸ್ಟಾಲಿನ್ ಹೇಳಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿ ಲಕ್ಷಾಂತರ ಫಾರ್ಮ್‌ಗಳನ್ನು ಭರ್ತಿ ಮಾಡಿ, ಅವುಗಳನ್ನು ಗಣಕೀಕರಿಸಿ ಡಿಸೆಂಬರ್ 7 ರೊಳಗೆ ಪಟ್ಟಿಯನ್ನು ಬಿಡುಗಡೆ ಮಾಡುವುದು ಅಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಎಸ್‌ಐಆರ್ ಬಗ್ಗೆ ನಾಗರಿಕರ ಕಳವಳಗಳನ್ನು ಪರಿಹರಿಸಲು ಡಿಎಂಕೆ 8065420020 ಸಹಾಯವಾಣಿ ಸಂಖ್ಯೆಯನ್ನು ಪ್ರಾರಂಭಿಸಿದೆ ಎಂದು ಸ್ಟಾಲಿನ್ ಹೇಳಿದರು. ನಿಮ್ಮ ಮತದಾನದ ಹಕ್ಕನ್ನು ರಕ್ಷಿಸಿ. ಇದು ಪ್ರಜಾಪ್ರಭುತ್ವದ ಆತ್ಮವಾಗಿದೆ. ಮತ ಕಳ್ಳತನದ ಬೆದರಿಕೆ ಈಗ ನಮ್ಮ ಮನೆ ಬಾಗಿಲಿಗೆ ತಲುಪಿದೆ. ನಾವು ಅದರ ವಿರುದ್ಧ ಒಟ್ಟಾಗಿ ಹೋರಾಡಬೇಕು ಎಂದು ಸ್ಟಾಲಿನ್ ಸಾರ್ವಜನಿಕರನ್ನು ಒತ್ತಾಯಿಸಿದ್ದಾರೆ.(ಏಜೆನ್ಸೀಸ್)