ನ್ಯೂಸ್

ಸಿಬ್ಬಂದಿ ಬಲಕ್ಕೆ ಸರ್ಜರಿ; ಆಡಳಿತ ಸುಧಾರಣಾ ಆಯೋಗದ ಆರನೇ ವರದಿ ಸಲ್ಲಿಕ

ಬೆಂಗಳೂರು: ಜನಸ್ನೇಹಿ ಆಡಳಿತ, ಸಿಬ್ಬಂದಿ ಮೇಲೆ ಒತ್ತಡ ಇಳಿಸುವ ಹಲವು ಉಪಾಯಗಳು, ಅನಗತ್ಯ ವೆಚ್ಚಕ್ಕೆ ಕಡಿವಾಣದ ಜತೆಗೆ ಆದಾಯ ಸುಧಾರಿಸಿಕೊಳ್ಳುವ ಮಾಗೋಪಾಯಗಳನ್ನು ರಾಜ್ಯ ಸರ್ಕಾರದ ಮುಂದಿಡಲಾಗಿದೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಡಳಿತ ಸುಧಾರಣಾ ಆಯೋಗ-2ರ ಅಧ್ಯಕ್ಷ, ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಶನಿವಾರ ಭೇಟಿ ಮಾಡಿ ವಿವಿಧ ಶಿಫಾರಸುಗಳ ಆರನೇ ವರದಿಯನ್ನು ಸಲ್ಲಿಸಿದರು. ಉತ್ತಮ ಗುಣಮಟ್ಟದ ಸೇವೆಗಳನ್ನು ನಾಗರಿಕರಿಗೆ ಖಾತರಿಪಡಿಸುವುದು, ಕಚೇರಿಗಳು ಜನಪರವಾಗಿ ಕೆಲಸ ಮಾಡಬಹುದಾದ ರೀತಿ- ರಿವಾಜುಗಳನ್ನು ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ.

ಸಿಬ್ಬಂದಿ ಬಲಕ್ಕೆ ಸರ್ಜರಿ: ಲಭ್ಯ ತಂತ್ರಜ್ಞಾನವನ್ನು ಆಡಳಿತದಲ್ಲಿ ಅಳವಡಿಸಿಕೊಳ್ಳಲಾಗಿದೆ. ಇದರ ಸಮರ್ಪಕ ಬಳಕೆ, ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತು ನೀಡಿದರೆ ದಕ್ಷತೆ ಸಾಧಿಸಿ, ಸುಗಮ ಆಡಳಿತ ಆಗು ಮಾಡುವ ಹಲವು ಕ್ರಮಗಳ ಮೇಲೂ ಆಯೋಗ ಬೆಳಕು ಚೆಲ್ಲಿದೆ. ಎಚ್​ಆರ್​ಎಂಎಸ್, ಖಜಾನೆ-2, ಇ-ಅಫೀಸ್, ಇ-ಪಿಎಆರ್ ಮತ್ತು ಇ-ಸೇವಾವಹಿಗಳನ್ನು ಅಳವಡಿಸಿಕೊಂಡಿರುವುದರಿಂದ ಲಿಪಿಕ ಕೆಲಸವು ಗಣನೀಯವಾಗಿ ತಗ್ಗಿದೆ. ಹೆಚ್ಚಿನ ಪ್ರಥಮ ದರ್ಜೆ, ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳನ್ನು ಮುಂದುವರಿಸುವ ಅಗತ್ಯವಿಲ್ಲ. ಪ್ರತಿ ಇಲಾಖೆಯಲ್ಲಿ ಈ ಹುದ್ದೆಗಳನ್ನು ಪರಿಶೀಲಿಸಿ ಮರುವ್ಯವಸ್ಥೆ ಮಾಡುವುದು ಇಲ್ಲವೇ ತಾಂತ್ರಿಕ ಹುದ್ದೆಗಳನ್ನಾಗಿ ಪರಿವರ್ತಿಸಲು (ಉದಾಹರಣೆಗೆ ಅರಣ್ಯ ಇಲಾಖೆಯಲ್ಲಿ ಅರಣ್ಯ ರಕ್ಷಕರಾಗಿ) ಈ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಅಧಿಕಾರ ವಿಕೇಂದ್ರೀಕರಣ: ಗ್ರೂಪ್-ಸಿ, ಡಿ ವೃಂದ ಸಿಬ್ಬಂದಿಯ ಶಿಶುಪಾಲನಾ ರಜೆ, ಕಾಲಮಿತಿ ವೇತನ ಬಡ್ತಿ, ಸ್ಥಗಿತ ವೇತನ ಬಡ್ತಿ ಮತ್ತು ವೈದ್ಯಕೀಯ ಮರು ಪಾವತಿಯಂತಹ ಪ್ರಯೋಜನಗಳನ್ನು ಮಂಜೂರು ಮಾಡುವ ಅಧಿಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಕಚೇರಿಗಳಲ್ಲಿ ಕೇಂದ್ರೀಕೃತವಾಗಿದೆ. ಈ ಅಧಿಕಾರವನ್ನು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಪ್ರಯೋಜಿಸುವುದು. ಗ್ರೂಪ್-ಬಿ ನೌಕರರ ಶಿಶುಪಾಲನಾ ರಜೆ ಮಂಜೂರು ಮಾಡುವ ಅಧಿಕಾರವನ್ನು ಸಹ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಪ್ರತ್ಯಾಯೋಜಿಸಲು ತಿಳಿಸಿದೆ. ಅಧೀನ ಕಚೇರಿಗಳು ಭೌತಿಕ ಕಡತಗಳ ಬದಲು ಇ-ಆಫೀಸ್​ಗಳ ಮೂಲಕ ಮಾತ್ರ ಕಡತಗಳು ಮತ್ತು ಪ್ರಸ್ತಾವನೆಗಳನ್ನು ಕಳುಹಿಸಬೇಕು. ಇ-ಪಿಎಆರ್ ಹಾಗೂ ಇ-ಸೇವಾವಹಿ ಅನುಷ್ಠಾನಕ್ಕೆ ಕಾಲಮಿತಿ ನಿಗದಿಪಡಿಸಿ ಆದೇಶಿಸಲು ಆಯೋಗ ಶಿಫಾರಸು ಮಾಡಿದೆ.

ದಂಡ, ಶುಲ್ಕ ಪರಿಷ್ಕರಣೆ: 1960 ಹಾಗೂ ನಂತರದ ದಶಕಗಳಲ್ಲಿ ಅನೇಕ ಕಾಯ್ದೆ, ನಿಯಮಗಳು ಜಾರಿಯಾಗಿವೆ. ಆದರೆ ಶಿಕ್ಷೆ, ದಂಡ ಹಾಗೂ ಶಿಕ್ಷೆಯ ಉಪಬಂಧ ಪರಿಷ್ಕರಣೆಯಾಗಿಲ್ಲ. ಉದಾಹರಣೆಗೆ ಅರಣ್ಯ ಉತ್ಪನ್ನಗಳ ಸಾಗಣೆಗೆ ದಂಡ 500 ರೂ. ಗಳಿದ್ದು, ಇದನ್ನು 1964ರಲ್ಲಿ ನಿಗದಿಪಡಿಸಲಾಗಿದೆ. ಇದರಿಂದಾಗಿ ಹೆಚ್ಚಿನ ಪ್ರಕರಣಗಳಲ್ಲಿ ದಂಡದ ಮೊತ್ತಕ್ಕಿಂತ ದಾವೆಯ ವೆಚ್ಚವೇ ಅನೇಕ ಪಟ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ದಂಡ, ಶಿಕ್ಷೆಯ ಉಪಬಂಧ ಪರಿಣಾಮಕಾರಿಯಾಗಿಸಲು ಹಣದುಬ್ಬರ ಸೂಚ್ಯಂಕದ ಹೆಚ್ಚಳವನ್ನು ಆಧರಿಸಿ ಪರಿಷ್ಕರಿಸುವ ಅಗತ್ಯವಿದೆ.

ಕಾನೂನು ಇಲಾಖೆ- ಇ-ಆಡಳಿತ ಇಲಾಖೆಯಿಂದ ಪ್ರತಿ ಇಲಾಖೆಗೆ ವಕೀಲರ ಶುಲ್ಕ ಪಾವತಿಸಲು ಏಕೀಕೃತ ಪೋರ್ಟಲ್ ಅಭಿವೃದ್ಧಿಪಡಿಸುವುದು. ಸರ್ಕಾರಿ ಮತ್ತು ಪ್ಯಾನಲ್ ವಕೀಲರು ತಮ್ಮ ವೃತ್ತಿಪರ ಶುಲ್ಕ ಬಿಲ್​ಗಳನ್ನು ನೇರವಾಗಿ ಆನ್​ಲೈನ್​ನಲ್ಲಿ ಸಲ್ಲಿಸಲು ಸಾಧ್ಯವಾಗಲಿದೆ.

ಇ-ಪ್ರೊಕ್ಯೂರ್​ವೆುಂಟ್ ಪೋರ್ಟಲ್​ನಲ್ಲಿ ಲಭ್ಯ ಎಲ್ಲ ದಾಖಲೆಗಳನ್ನು ಸಾರ್ವಜನಿಕ ಡೊಮೈನ್​ಗೆ ಅಪ್​ಲೋಡ್ ಮಾಡಬೇಕು. ಇದರಿಂದ ಆರ್​ಟಿಐ ಅರ್ಜಿದಾರರು ಅಗತ್ಯ ಶುಲ್ಕ ಪಾವತಿಸಿ, ಬೇಕಾದ ದಾಖಲೆಗಳನ್ನು ಡೌನ್​ಲೋಡ್ ಮಾಡಿಕೊಳ್ಳಬಹುದು ಎಂದು ಆಯೋಗ ತಿಳಿಸಿದೆ.

ಬಳಕೆದಾರರ ಬೇಡಿಕೆಗಳು: ಆಯೋಗವು ಕಾಲ್ ಸೆಂಟರ್ ಮೂಲಕ 23 ಇಲಾಖೆಗಳ 138 ನಾಗರಿಕ ಸೇವೆಗಳ ಬಗ್ಗೆ ಕರೆ ಮಾಡಿದ 74,108 ಬಳಕೆದಾರರ ಪೈಕಿ 25,522 ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಬಳಕೆದಾರರು ವ್ಯಕ್ತಪಡಿಸಿದ ಪ್ರಮುಖ ಬೇಡಿಕೆಗಳೆಂದರೆ ಸಕಾಲದಲ್ಲಿ ಸೇವೆಗಳನ್ನು ಒದಗಿಸುವುದು. ಬಳಕೆದಾರರಿಗೆ ಅನುಕೂಲವಾಗುವಂತೆ ಮಾಡುವುದು. ಅರ್ಜಿದಾರರಿಗೆ ಮಾಹಿತಿ ಒದಗಿಸುವುದು. ಕಚೇರಿಗಳಲ್ಲಿ ಉತ್ತಮಗುಣಮಟ್ಟದ ಸಂವಹನ ಖಚಿತಪಡಿಸಿಕೊಳ್ಳುವುದು. ಬಳಕೆದಾರಸ್ನೇಹಿ ವೆಬ್​ಸೈಟ್ ಮತ್ತು ತಂತ್ರಜ್ಞಾನ. ಕಚೇರಿಗಳನ್ನು ದಲ್ಲಾಳಿ ಮುಕ್ತಗೊಳಿಸುವುದು.

ವರದಿ ಪ್ರಕಾರ ಕೈಗೊಂಡ ಕ್ರಮಗಳು: ಆಯೋಗವು ಈಗಾಗಲೇ ಸರ್ಕಾರಕ್ಕೆ ಐದು ವರದಿಗಳನ್ನು ಸಲ್ಲಿಸಿದೆ. 23 ಇಲಾಖೆಗಳಿಗೆ ಸಂಬಂಧಿಸಿದ 3,630 ಶಿಫಾರಸುಗಳನ್ನು ಮಾಡಿದೆ. ಈ ಪೈಕಿ 66 ಶಿಫಾರಸುಗಳನ್ನು ಅನುಷ್ಠಾನಕ್ಕೆ ತಂದಿದ್ದರೆ, 13 ಒಪ್ಪಿಲ್ಲ. 284 ಕ್ರಮಕೈಗೊಳ್ಳುವ ಹಂತದಲ್ಲಿದ್ದರೆ, 90 ಶಿಫಾರಸುಗಳು ಪರಿಶೀಲನೆಯಲ್ಲಿವೆ. ಆರನೇ ವರದಿಯಲ್ಲಿ ಏಳು ಇಲಾಖೆಗಳಿಗೆ ಸಂಬಂಧಿಸಿದಂತೆ 882 ಶಿಫಾರಸುಗಳನ್ನು ಮಾಡಿದೆ.

ಶಿಫಾರಸು ಮುಖ್ಯಾಂಶಗಳು

  • ಕಟ್ಟಡ ಅನುಮೋದನೆ, ಅಭಿವೃದ್ಧಿ, ರಸ್ತೆ ಅಗೆತ ಮತ್ತು ಸಾಮಗ್ರಿ ಶುಲ್ಕಗಳ ಒಟ್ಟಾರೆ ಮೊತ್ತದ ಬದಲಾಗಿ ಕಟ್ಟಡ ಅಂದಾಜು ವೆಚ್ಚ ಅಥವಾ ನಿವೇಶನದ ಮಾರ್ಗಸೂಚಿ ದರದ ಶೇಕಡಾವಾರು ನಿಗದಿಗೆ ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ
  • ದೀರ್ಘಕಾಲದವರೆಗೆ ನಿವೇಶನ ಖಾಲಿಯಿಟ್ಟ ಮಾಲೀಕರಿಗೆ ದಂಡ ವಿಧಿಸುವುದು. ಗೃಹಮಂಡಳಿಯ ಖಾಲಿ ನಿವೇಶನ ಗಳ ಶುದ್ಧ ಕ್ರಯಪತ್ರ ನೋಂದಣಿಗೆ ನಿವೇಶದನ ಪ್ರಸ್ತುತ ಮಾರ್ಗಸೂಚಿ ದರದ ಶೇ.25 ದಂಡದ ಮೊತ್ತ ನಿಗದಿ.
  • ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ ಹಂಚಿಕೆಯಾಗದೆ ಉಳಿದ 300 ವಿಶ್ವ ವರ್ಕ್​ಶೆಡ್​ಗಳು, ಆಸ್ತಿ ಹಕ್ಕುಗಳನ್ನು ವರ್ಗಾಯಿಸದೆ ಸಾರ್ವಜನಿಕ ಉದ್ದೇಶಿಗಳಿಗಾಗಿ ಬಳಸಲು ಗ್ರಾ.ಪಂ. ಮತ್ತು ಪುರಸಭೆಗಳಿಗೆ ಹಸ್ತಾಂತರ
  • ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿಗಳಿಗೆ ಅವಧಿ ಮುಗಿದ ನಂತರವೂ ಕೈಗಾರಿಕೆಗಳನ್ನು ಸ್ಥಾಪಿಸದ ಕೆಐಎಡಿಬಿ ಮತ್ತು ಕೆಎಸ್​ಎಸ್​ಐಡಿಸಿ ಕೈಗಾರಿಕೆ ನಿವೇಶನ ಗುರುತಿಸುವ ಅಭಿಯಾನ ಕೈಗೆತ್ತಿಕೊಳ್ಳಲು ಸೂಚನೆ

ಸಹಕಾರಿ ಇಲಾಖೆ ಹುದ್ದೆಗಳು ರದ್ದು: ರಾಜ್ಯದ 74 ಸಕ್ಕರೆ ಕಾರ್ಖಾನೆಗಳ ಪೈಕಿ ಕೇವಲ 14 ಸಹಕಾರಿ, ಉಳಿದವು ಖಾಸಗಿ ಒಡೆತನದಲ್ಲಿವೆ. ಇದರಿಂದಾಗಿ ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ನಿರ್ದೇಶನಾಲಯದಲ್ಲಿ ಸಹಕಾರಿ ಅಧಿಕಾರಿಗಳ ಅಗತ್ಯವಿಲ್ಲ. ನಿರ್ದೇಶನಾಲಯ ದಲ್ಲಿರುವ ಸಹಕಾರಿ ಇಲಾಖೆಯ ಹುದ್ದೆಗಳನ್ನು ರದ್ದುಪಡಿಸಬಹುದು ಎಂದು ಆರನೇ ವರದಿಯಲ್ಲಿ ಆಯೋಗ ಶಿಫಾರಸು ಮಾಡಿದೆ.