ಬೆಂಗಳೂರು: ತಪ್ಪು ಮಾಡಿ ಸಿಕ್ಕಿಬಿದ್ದಿದ್ದರಿಂದ ಉಂಟಾದ ಮುಜುಗರ ಎದುರಿಸಲಾಗದೆ ಮನನೊಂದ ವಿದ್ಯಾರ್ಥಿಯೊಬ್ಬ ಅಪಾರ್ಟ್ಮೆಂಟ್ವೊಂದರ ಹತ್ತನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಮೊಹಿನ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ಬೆಂಗಳೂರಿನ ನಾಗವಾರ ಬಳಿಯ ಆರ್.ಆರ್. ಸಿಗ್ನೇಚರ್ ಅಪಾರ್ಟ್ಮೆಂಟ್ನಲ್ಲಿ ಈ ಘಟನೆ ನಡೆದಿದೆ. ಇಂದು ಮೊಹಿನ್ ಓದುತ್ತಿದ್ದ ಶಾಲೆಯಲ್ಲಿ ಇಂಗ್ಲಿಷ್ ಪರೀಕ್ಷೆ ನಡೆಯುತ್ತಿದ್ದಾಗ ಆತ ನಕಲು ಮಾಡಲು ಯತ್ನಿಸಿದ್ದ. ಅದಕ್ಕೆ ಬೈದ ಟೀಚರ್ ಬಳಿಕ ತರಗತಿಯಿಂದ ಹೊರಗೆ ನಿಲ್ಲುವಂತೆ ಹೇಳಿದ್ದರು.
ಇದರಿಂದ ತೀವ್ರ ಮುಜುಗರಕ್ಕೆ ಒಳಗಾದ ಈತ ಬಳಿಕ ಶಾಲೆಯಿಂದ ಮರಳಿದ ಮೇಲೆ ಬೇರೊಂದು ಅಪಾರ್ಟ್ಮೆಂಟ್ಗೆ ಹೋಗಿ ಅಲ್ಲಿನ ಹತ್ತನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ. ಸಂಪಿಗೆಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.