ಬೆಂಗಳೂರು: ಸರ್ಕಾರವು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಎರಡು ಪೂರಕ ಪರೀಕ್ಷೆಗಳನ್ನು ನಡೆಸುತ್ತಿರುವುದು ವಿದ್ಯಾರ್ಥಿಸ್ನೇಹಿಯಾಗಿದ್ದರೂ ತೀರಾ ಅವೈಜ್ಞಾನಿಕ ಮತ್ತು ಅಪ್ರಯೋಜಕವಾಗಿದೆ. ಹೀಗಾಗಿ ತನ್ನ ಚಿಂತನೆಯನ್ನು ಪುನರ್ ಪರಿಶೀಲಿಸುವಂತೆ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಆಗ್ರಹಿಸಿದೆ.
ಈ ಕುರಿತು ಸಂಘದ ಅಧ್ಯಕ್ಷ ಎ.ಎಸ್. ನಿಂಗೇಗೌಡ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಈಗಾಗಲೇ ಪ್ರಥಮ ಮತ್ತು ದ್ವಿತೀಯ ಕಿರು ಪರೀಕ್ಷೆ, ಮಧ್ಯ ವಾರ್ಷಿಕ ಪರೀಕ್ಷೆ, ಪೂರ್ವ ಸಿದ್ದತಾ ಪರೀಕ್ಷೆ, ವಾರ್ಷಿಕ ಪರೀಕ್ಷೆ ಮತ್ತು ಪೂರಕ ಪರೀಕ್ಷೆ ನಡೆಸಿ ಮೌಲ್ಯಮಾಪನ ನಡೆಸಿ ಫಲಿತಾಂಶ ಪ್ರಕಟಿಸುವ ಒತ್ತಡ ಶಿಕ್ಷಕರ ಮೇಲಿದೆ. ಇಲಾಖೆ ಇನ್ನೊಂದು ಪೂರಕ ಪರೀಕ್ಷೆ ನಡೆಸಿದರೆ ವರ್ಷ ಪೂರ್ತಿ ಪರೀಕ್ಷೆ ನಡೆಸಿ, ವರ್ಷ ಪೂರ್ತಿ ಮೌಲ್ಯಮಾಪನ ನಡೆಸುತ್ತ ಹೋದರೆ ವಿದ್ಯಾರ್ಥಿಗಳಿಗೆ ಪಠ್ಯಬೋಧನೆ ನಡೆಸುವುದು ಪ್ರಾಯೋಗಿಕವಾಗಿ ಕಷ್ಟವಾಗಲಿದೆ ಎಂದು ಸಂಘ ತನ್ನ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದೆ.
ಪಪೂ ಕಾಲೇಜುಗಳಲ್ಲಿ 4,073 ಉಪನ್ಯಾಸಕರ ಮತ್ತು ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ 2,500 ಉಪನ್ಯಾಸಕರ ಕೊರತೆಯಿದೆ, ಕೇಂದ್ರೀಯ ವಿದ್ಯಾಲಯಗಳಾದ ಸಿಬಿಎಸ್‌ಇ, ಐಸಿಎಸ್‌ಇಗಳಲ್ಲಿರುವ ವಿದ್ಯಾರ್ಥಿ ಮತ್ತು ಶಿಕ್ಷಕರ ಅನುಪಾತ 40:1 ಅನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಇನ್ನೂ ಜಾರಿಗೆ ತಂದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.