ಬೆಂಗಳೂರು: ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಮಂಡಳಿ ಆಯೋಜಿಸುವ ಎಸ್ಎಸ್ಎಲ್ಸಿ ಪರೀಕ್ಷೆಯ ದಿನಾಂಕಗಳು ಪ್ರಕಟವಾಗಿವೆ. ಜೂನ್ 25ರಿಂದ ಜುಲೈ 4ರವರೆಗೆ ಪರೀಕ್ಷೆಗಳು ನಡೆಯಲಿವೆ.
ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವ ಎಸ್. ಸುರೇಶ್ಕುಮಾರ್ ಈ ವಿಷಯ ತಿಳಿಸಿದರು. ಜೂನ್ 18ರಂದು ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ನಡೆಯಲಿರುವುದಾಗಿ ತಿಳಿಸಿದರು.
ರಾಜ್ಯಾದ್ಯಂತ ಇರುವ 2,879 ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ 8,48,196 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳ ಸಲಹೆ ಮೇರೆಗೆ ಪರೀಕ್ಷೆಯ ದಿನಾಂಕಗಳನ್ನು ನಿರ್ಧರಿಸಲಾಗಿದೆ ಎಂದರು.
ಮಾಸ್ಕ್ ಧರಿಸುವುದು ಕಡ್ಡಾಯ: ಪರೀಕ್ಷಾ ಕೇಂದ್ರಗಳಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಸ್ಯಾನಿಟೈಸರ್ಗಳನ್ನು ಬಳಸಲಾಗುವುದು. ವಿದ್ಯಾರ್ಥಿಗಳು ಪರೀಕ್ಷೆಗೆ ಬರುವಾಗ ಮಾಸ್ಕ್ ಧರಿಸಿ ಬರುವುದು ಕಡ್ಡಾಯವಾಗಿದೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಎಲ್ಲ ಮಕ್ಕಳಿಗೆ ಮಾಸ್ಕ್ ಕೊಡಲು ಸಿದ್ಧರಾಗಿದ್ದಾರೆ. ಇವರ ಜತೆಗೆ ಬೆಂಗಳೂರು ದಕ್ಷಿಣ ಮತ್ತು ರಾಮನಗರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಬನ್ನೇರುಘಟ್ಟದ ಶಿವನಹಳ್ಳಿಯ ರಾಮಕೃಷ್ಣ ಮಿಷನ್ 2 ಲಕ್ಷ ಮಾಸ್ಕ್ಗಳನ್ನು ವಿತರಿಸಲಿದ್ದಾರೆ ಎಂದು ತಿಳಿಸಿದರು.
ಎಲ್ಲಿದ್ದಾರೋ ಅಲ್ಲಿಯೇ ಪರೀಕ್ಷೆ: ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ವಿದ್ಯಾರ್ಥಿನಿಲಯಗಳು, ಪರಿಶಿಷ್ಟ ಜಾತಿ ಮತ್ತು ವರ್ಗದವರ ವಿದ್ಯಾರ್ಥಿ ನಿಲಯಗಳು, ಮೊರಾರ್ಜಿ ದೇಸಾಯಿ ಶಾಲೆಗಳನ್ನು ಕ್ವಾರಂಟೈನ್ ಸೌಲಭ್ಯಕ್ಕಾಗಿ ಬಳಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆ ಎಲ್ಲ ವಿದ್ಯಾರ್ಥಿನಿಲಯಗಳಲ್ಲಿದ್ದ ವಿದ್ಯಾರ್ಥಿಗಳಿಗೆ ಎಲ್ಲಿದ್ದಾರೋ ಅಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು.
ಇಂಥ ವಿದ್ಯಾರ್ಥಿಗಳು ಮೇ 25ರೊಳಗೆ ತಮ್ಮ ಹತ್ತಿರದ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆಯಲು ಅವಕಾಶಕ್ಕಾಗಿ ಮನವಿ ಸಲ್ಲಿಸಬೇಕು. ಅದನ್ನು ಪರಿಗಣಿಸಿ, ಆಯಾ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಆ ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡಲಾವುದು ಎಂದರು.
ಪುನರ್ಮನನ ತರಗತಿಗಳು: ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಚಂದನ ವಾಹಿನಿಯಲ್ಲಿ ಏ.29ರಿಂದ ಪುನರ್ಮನನ ತರಗತಿಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.
ಮೇ 4ರಿಂದ ಇಂಗ್ಲಿಷ್ ಭಾಷೆಯ ಪುನರ್ಮನನ ತರಗತಿಗಳು ಆರಂಭವಾಗಿವೆ. ಇದೇ ರೀತಿ ಮಾಸಾಂತ್ಯದವರೆಗೆ ಇತರೆ ವಿಷಯಗಳ ಬಗ್ಗೆಯೂ ಪುನರ್ಮನನ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.
ಸ್ವಲ್ಪದಿನಗಳ ನಂತರ ಮಾದರಿ ಪ್ರಶ್ನೆಪತ್ರಿಕೆಗಳನ್ನು ಕೊಟ್ಟು, ಉತ್ತರ ಬರೆಯುವುದು ಹೇಗೆ ಎಂಬ ಬಗ್ಗೆ ಮೂರು ದಿನ ಮಾಹಿತಿ ನೀಡಲಾಗುವುದು ಎಂದರು.