ನ್ಯೂಸ್

ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ; 8.73 ಲಕ್ಷ ವಿದ್ಯಾರ್ಥಿಗಳು ನೋಂದಣಿ

Webdesk - Ravikanth

ಬೆಂಗಳೂರು: ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ 3,444 ಕೇಂದ್ರಗಳಲ್ಲಿ ಇಂದಿನಿಂದ ಏ.11ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳಲ್ಲಿ ಅಂತಿಮ ಸಿದ್ಧತೆ ಮಾಡಿಕೊಂಡಿದ್ದು, ವಿದ್ಯಾರ್ಥಿಗಳ ಆಗಮನಕ್ಕೆ ಕೇಂದ್ರಗಳು ಎದುರು ನೋಡುತ್ತಿವೆ. ಮೊದಲೇ ಹೇಳಿರುವಂತೆ ಹಿಜಾಬ್ ಧರಿಸಿ ಬರುವವರಿಗೆ ಪ್ರವೇಶ ಇಲ್ಲ.

ಈ ಬಾರಿ ಎಸ್​ಎಸ್​ಎಲ್​ಸಿ ಪರೀಕ್ಷೆಗೆ 15,387 ಶಾಲೆಗಳಿಂದ 8,73,846 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 4,52,732 ಗಂಡು ಮತ್ತು 4,21,110 ಹೆಣ್ಣು ಮಕ್ಕಳಿದ್ದು, 4 ವಿದ್ಯಾರ್ಥಿಗಳು ತೃತೀಯ ಲಿಂಗಿಗಳಾಗಿದ್ದಾರೆ. ಒಟ್ಟಾರೆ 45,289 ಪರೀಕ್ಷಾ ಕೊಠಡಿಗಳು, 3,444 ಮುಖ್ಯ ಅಧೀಕ್ಷಕರು, 377 ಉಪ ಮುಖ್ಯ ಅಭಿರಕ್ಷಕರು, 49,817 ಕೊಠಡಿ ಮೇಲ್ವಿಚಾರಕರು, 3,444 ಸ್ಥಾನಿಕ ಜಾಗೃತ ದಳದವರು ಹಾಗೂ ಮೊಬೈಲ್ ಸ್ವಾಧೀನಾಧಿಕಾರಿಗಳನ್ನು ಪರೀಕ್ಷೆಯ ಭದ್ರತಾ ದೃಷ್ಟಿಯಿಂದ ನೇಮಕ ಮಾಡಲಾಗಿದೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ರಾಜ್ಯದ ವಿವಿಧ ಜಿಲ್ಲೆಗಳಿಗೆ ಪ್ರವಾಸ ನಡೆಸಿ ಜಿಲ್ಲೆಯಲ್ಲಿ ಪರೀಕ್ಷೆ ಮಾಡಿಕೊಂಡಿರುವ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದ್ದಾರೆ.

ಮಾಸ್ಕ್ ಕಡ್ಡಾಯ ಅಲ್ಲ: ಕರೊನಾ ಸೋಂಕಿನ ಪ್ರಕರಣ ಗಳು ಕಡಿಮೆ ಆಗುವುದರಿಂದ ವಿದ್ಯಾರ್ಥಿಗಳು ಮಾಸ್ಕ್ ಧರಿಸಿಸದೆ ಇದ್ದರೂ ಪ್ರವೇಶ ಕಲ್ಪಿಸಲು ನಿರ್ಧರಿಸಿದೆ. ಹೀಗಿದ್ದರೂ ಪರೀಕ್ಷೆ ವೇಳೆ ಪ್ರಮಾಣಿತ ಕಾರ್ಯಾಚರಣಾ ವಿಧಾನ ಅನುಸರಿಸಲು ಸೂಚಿಸಲಾಗಿದೆ.

ಅನಧಿಕೃತ ವಿದ್ಯಾರ್ಥಿಗಳಿಗೂ ಅವಕಾಶ: ರಾಜ್ಯದಲ್ಲಿ 15,387 ಶಾಲೆಗಳಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಿದ್ಧರಾಗಿದ್ದಾರೆ. ಈ ಪೈಕಿ 168 ಶಾಲೆಗಳು ಈವರೆಗೆ ಮಾನ್ಯತೆ ನವೀಕರಣ ಮಾಡಿಕೊಂಡಿಲ್ಲ. ಇಲ್ಲಿ ವ್ಯಾಸಂಗ ಮಾಡುತ್ತಿರುವ 1,896 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನರ್ಹರಾಗುತ್ತಾರೆ. ವಿದ್ಯಾರ್ಥಿಗಳ ಭವಿಷ್ಯ ದೃಷ್ಟಿಯಿಂದ ಬೇರೆ ಶಾಲೆಗಳಿಗೆ ವರ್ಗಾವಣೆ ಮಾಡಿ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗು ತ್ತಿದೆ. ಮಾನ್ಯತೆ ನವೀಕರಣಕ್ಕೆ ಷರತ್ತುಗಳನ್ನು ಸರ್ಕಾರ ವಿಧಿಸಿರು ವುದರಿಂದ ಶಾಲಾ ಆಡಳಿತ ಮಂಡಳಿಗಳು ಪರೀಕ್ಷೆ ಬಂದರೂ, ಮಾನ್ಯತೆ ನವೀಕರಿಸಿಕೊಂಡಿಲ್ಲ. ಈ ಎಲ್ಲ ಶಾಲೆಗಳು ನಿಯಮದ ಪ್ರಕಾರ, ಅನಧಿಕೃತ ಶಾಲೆಗಳಾಗುತ್ತವೆ. ಆದರೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆ ನೀಡಲಾಗುತ್ತಿದೆ.

ಮೇ ಎರಡನೇ ವಾರ ಫಲಿತಾಂಶ: ಏ.21ರ ನಂತರ 34 ಶೈಕ್ಷಣಿಕ ಜಿಲ್ಲೆಗಳಲ್ಲಿ 234 ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯಲಿದೆ. ಈ ಕಾರ್ಯಕ್ಕೆ 60 ಸಾವಿರ ಶಿಕ್ಷಕರನ್ನು ನಿಯೋಜಿಸಲು ತೀರ್ವನಿಸಿದೆ. ಮುಖ್ಯ ಪರೀಕ್ಷೆಯು ಫಲಿತಾಂಶವು ಮೇ ಎರಡನೇ ವಾರದಲ್ಲಿ ಪ್ರಕಟವಾಗುವ ನಿರೀಕ್ಷೆಯಿದೆ.