ಹೈದರಾಬಾದ್: ಕರೊನಾ ವೈರಸ್ನಿಂದಾಗಿ ಈಗ ಬಹುತೇಕ ಎಲ್ಲಾ ಪರೀಕ್ಷೆಗಳೂ ರದ್ದುಗೊಂಡಿವೆ. ಆದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅತಿ ಮುಖ್ಯ ಎಂದೇ ಭ್ರಮಿಸಲಾಗಿರುವ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಕೂಡ ಇದೀಗ ರದ್ದು ಮಾಡಲಾಗಿದೆ. ಅಂದಹಾಗೆ ಪರೀಕ್ಷೆ ರದ್ದುಗೊಂಡಿರುವ ರಾಜ್ಯ ತೆಲಂಗಾಣ.
ಎಸ್ಎಸ್ಎಲ್ಸಿ ಪರೀಕ್ಷೆಯನ್ನು ರದ್ದು ಮಾಡಿ ತೆಲಂಗಾಣ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಕರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ತೆಲಂಗಾಣ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ. ಪರೀಕ್ಷೆ ನಡೆಸುವ ವೇಳೆ ವಿದ್ಯಾರ್ಥಿಗಳಿಗೆ ಸೋಂಕು ಹರಡುವ ಅಪಾಯವಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ.
ತೆಲಂಗಾಣದಲ್ಲಿ ಈ ವರ್ಷ 5,34,903 ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ತೆಗೆದುಕೊಂಡಿದ್ದರು. ಎಲ್ಲರನ್ನೂ ಈ ವರ್ಷ ಪಾಸ್ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಇಲ್ಲಿಯವರೆಗೆ ಅಂದರೆ ಇಂಟರ್ನಲ್ ಪರೀಕ್ಷೆಯಲ್ಲಿ ತೆಗೆದುಕೊಂಡಿರುವ ಅಂಕಗಳ ಆಧಾರದ ಮೇಲೆ ಗ್ರೇಡ್ ನೀಡಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ತಿಳಿಸಿದ್ದಾರೆ.
ಎಲ್ಲವೂ ಸರಿಯಿದ್ದರೆ ಮಾರ್ಚ್ ಅಂತ್ಯ ಇಲ್ಲವೇ ಏಪ್ರಿಲ್ ಮೊದಲ ವಾರದಲ್ಲಿಯೇ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಬೇಕಿತ್ತು. ಕರ್ನಾಟಕ ಸೇರಿದಂತೆ ಎಲ್ಲಿಯೂ ಕರೊನಾದಿಂದಾಗಿ ಪರೀಕ್ಷೆ ನಡೆದಿಲ್ಲ. ಎಲ್ಲಾ ರಾಜ್ಯಗಳೂ ಪರೀಕ್ಷೆಯನ್ನು ಮುಂದೂಡಿದೆ. ಕರ್ನಾಟಕದಲ್ಲಿಯೂ ಪರೀಕ್ಷೆ ಮುಂದೂಡಲಾಗಿದ್ದು, ಜೂನ್ 25ರಿಂದ ಜುಲೈ 4ರವರೆಗೆ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.
ಈ ನಡುವೆಯೇ, ತೆಲಂಗಾಣ ಸರ್ಕಾರ ಪರೀಕ್ಷೆ ರದ್ದು ಮಾಡಿದ್ದು, ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳ ಬಗ್ಗೆ ಪರಿಸ್ಥಿತಿ ಅವಲೋಕಿಸಿ ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ತೀರ್ಮಾನಿಸಿದೆ. (ಏಜೆನ್ಸೀಸ್)