ನ್ಯೂಸ್

ನನ್ನ ಸಾವಿಗೆ ರಾಜಮೌಳಿಯೇ ಕಾರಣ! ಮಹಿಳೆಗಾಗಿ ಆಪ್ತ ಸ್ನೇಹಿತನಿಗೆ ಹಿಂಸೆ ಕೊಟ್ರಾ Rajamouli

ಹೈದರಾಬಾದ್: ಆರ್​ಆರ್​ಆರ್​, ಬಾಹುಬಲಿ ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ನೀಡಿರುವ ಖ್ಯಾತ ನಿರ್ದೇಶಕ ಎಸ್​.ಎಸ್. ರಾಜಮೌಳಿ (SS Rajamouli) ಸದ್ಯ ಸೂಪರ್​ಸ್ಟಾರ್ ಮಹೇಶ್ ಬಾಬು ಅವರೊಂದಿಗೆ ಕೈ ಜೋಡಿಸಿದ್ದು, ಸಿನಿಮಾದ ಕೆಲಸಗಳು ಭರದಿಂದ ಸಾಗಿದೆ. ಇದರ ನಡುವೆಯೇ ರಾಜಮೌಳಿ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದ್ದು, ಸ್ಟಾರ್ ನಿರ್ದೇಶಕನ ಬಂಧನವಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ.

ಎಸ್.ಎಸ್.ರಾಜಮೌಳಿ (SS Rajamouli) ಅವರ ಸ್ನೇಹಿತ, ಮಾಜಿ ಸಹಯೋಗಿ ಶ್ರೀನಿವಾಸ ರಾವ್​ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್​ನೋಟ್​ನಲ್ಲಿ ರಾಜಮೌಳಿ ಅವರ ಹೆಸರನ್ನು ಬರೆದಿಟ್ಟಿದ್ದು, ಪೊಲೀಸರು ಪ್ರಕರಣದ ವಿಚಾರಣೆಯನ್ನು ಆರಂಭಿಸಿದ್ದಾರೆ.  ಯಮದೊಂಗ ಚಿತ್ರದ ಕಾರ್ಯಕಾರಿ ನಿರ್ಮಾಪಕ ಶ್ರೀನಿವಾಸ ರಾವ್ ಅವರು ಸಾಯುವ ಮೊದಲು ರಾಜಮೌಳಿ (SS Rajamouli) ಅವರ ಆಪ್ತರಿಗೆ ಸೆಲ್ಫಿ ವಿಡಿಯೋ ಮತ್ತು ಪತ್ರ ಒಂದನ್ನು ಕಳುಹಿಸಿದ್ದು, ಚಿತ್ರಹಿಂಸೆ ತಾಳಲಾರದೆ ಈ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ವಿಡಿಯೋದಲ್ಲಿ ಹೇಳಿದ್ದಾರೆ. ಶ್ರೀನಿವಾಸ್ ರಾವ್ ಅವರ ಸಾವು ಟಾಲಿವುಡ್​ನಲ್ಲಿ ಹೊಸ ಬಿರುಗಾಳಿಯನ್ನೇ ಎಬ್ಬಿಸಿದ್ದು, ರಾಜಮೌಳಿ ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಬೇಕೆಂದು ಆಗ್ರಹ ಕೇಳಿ ಬರುತ್ತಿದೆ.

ವಿಡಿಯೋದಲ್ಲಿ ಏನಿದೆ? 

ನನ್ನ ಸಾವಿಗೆ ರಾಜಮೌಳಿ ಮತ್ತು ಅವರ ಪತ್ನಿ ರಮಾ ಕಾರಣ. ನಾನು ಬಹಳ ವರ್ಷಗಳಿಂದಲೂ ಚಿತ್ರರಂಗದಲ್ಲಿದ್ದೇನೆ. ನಾನು ಹಾಗೂ ರಾಜಮೌಳಿ 34 ವರ್ಷಗಳಿಂದಲೂ ಆತ್ಮೀಯ ಗೆಳೆಯರು. ನಮ್ಮ ಗೆಳೆತನದ ಬಗ್ಗೆಯೂ ಹಲವರಿಗೆ ಗೊತ್ತು. ನಾನು ಹಾಗೂ ರಾಜಮೌಳಿ ಒಬ್ಬಳೇ ಯುವತಿಯನ್ನು ಪ್ರೀತಿಸಿದ್ದೆವು. ಆದರೆ ಆಗ ರಾಜಮೌಳಿ, ನೀನು ತ್ಯಾಗ ಮಾಡು ಅಂದು, ನಾನು ಸಹ ಹಾಗೆಯೇ ಮಾಡಿದೆ. ಆ ನಂತರ ನಾನು ಯಾರನ್ನೂ ಮದುವೆ ಆಗಲಿಲ್ಲ.

ಕೆಲ ತಿಂಗಳ ಮುಂಚೆ ನನಗೆ ಮತ್ತು ರಾಜಮೌಳಿಗೆ ಸಣ್ಣ ಮಾತಿನ ಚಕಮಕಿ ನಡೆಯಿತು, ಆಗ ನಾನು ನಮ್ಮಿಬ್ಬರ ಟ್ರಯಾಂಗಲ್ ಲವ್ ಸ್ಟೋರಿಯನ್ನು ಸಿನಿಮಾ ಮಾಡುತ್ತೀನಿ ಎಂದೆ. ಅದು ಅವನಿಗೆ ಭಯ ಹುಟ್ಟಿಸಿತು. ನಮ್ಮ ಕತೆಯನ್ನು ಎಲ್ಲರಿಗೂ ಹೇಳಿ ಬಿಡುತ್ತಾನೆ ಎಂದುಕೊಂಡು ನನಗೆ ಹಿಂಸೆ ಕೊಡಲು ಆರಂಭಿಸಿದೆ. ಭೈರವ, ಕಾರ್ತಿಕೇಯ (ಕೀರವಾಣಿ, ರಾಜಮೌಳಿ ಮಕ್ಕಳು) ಎಲ್ಲ ನನಗೆ ಆಪ್ತರಾಗಿದ್ದರು, ಆದರೆ ಅವರೂ ಸಹ ದೂರವಾದರು. ನಾನು ಒಂಟಿಯಾಗಿಬಿಟ್ಟೆ.

ಮೂವರು ವ್ಯಕ್ತಿಗಳ ನಡುವೆ ನಡೆದ ಘಟನೆಗೆ ಸಾಕ್ಷ್ಯಗಳು ಇರುವುದಿಲ್ಲ. ಆದರೆ ನಾನು ಈಗ ಸಾಯುತ್ತಿದ್ದೇನೆ. ಸುಮೋಟೊ (ಸ್ವಯಂ ಪ್ರೇರಿತ ದೂರು) ದಾಖಲಿಸಿಕೊಂಡು, ರಾಜಮೌಳಿಯನ್ನು ಲೈ ಡಿಟೆಕ್ಟರ್ ಬಳಸಿ ವಿಚಾರಣೆ ನಡೆಸಿದರೆ ನಿಜಾಂಶ ಹೊರಬರುತ್ತದೆ ಎಂದು ಶ್ರೀನಿವಾಸ್ ರಾವ್ ಸೆಲ್ಫಿ ವಿಡಿಯೋದಲ್ಲಿ ಆರೋಪಿಸಿದ್ದು, ಸದ್ಯ ಈ ವಿಚಾರ ಟಾಲಿವುಡ್​ನಲ್ಲಿ ಹೊಸ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ವಿಚಾರವಾಗಿ ರಾಜಮೌಳಿ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ.