ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ಸಂಕೀರ್ತನ ಯಾತ್ರೆಯ ಮುನ್ನದಿನವಾದ ಮಂಗಳವಾರ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಚಾಮರಾಜನಗರ ಎಸ್ಪಿ ಬಿ.ಟಿ.ಕವಿತಾ ನೇತೃತ್ವದಲ್ಲಿ ಪೊಲೀಸರು ಪಥ ಸಂಚಲನ ನಡೆಸಿದರು. 
ನ್ಯೂಸ್

ಹನುಮ ಮಾಲಾಧಾರಿಗಳ ಸಂಕೀರ್ತನ ಯಾತ್ರೆ ಇಂದು

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಡಿ.3ರಂದು (ಬುಧವಾರ) ಹನುಮ ಮಾಲಾಧಾರಿಗಳ ಬೃಹತ್ ಸಂಕೀರ್ತನ ಯಾತ್ರೆ ನಡೆಯುವ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ಸಂಪೂರ್ಣ ಕೇಸರಿಮಯವಾಗಿದೆ.
ಶ್ರೀ ಮೂಡಲಬಾಗಿಲು ಆಂಜನೇಯ ಸ್ವಾಮಿ ಸ್ಮರಣೆಗಾಗಿ ಹಿಂದು ಜಾಗರಣ ವೇದಿಕೆ ಹಮ್ಮಿಕೊಂಡಿರುವ 11ನೇ ವರ್ಷದ ಸಂಕೀರ್ತನ ಯಾತ್ರೆಯಲ್ಲಿ ಸಾವಿರಾರು ಹನುಮ ಭಕ್ತರು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಲಿದ್ದಾರೆ. ವಿವಿಧ ಹಿಂದು ಸಂಘಟನೆಗಳು ಗಂಜಾಂನ ನಿಮಿಷಾಂಬ ದೇಗುಲ ಮುಂಭಾಗದಿಂದ ಶ್ರೀ ರಂಗನಾಥಸ್ವಾಮಿ ಮೈದಾನದವರೆಗೂ ಪೇಟೆಬೀದಿ, ಮುಖ್ಯ ರಸ್ತೆಗಳು ಸೇರಿದಂತೆ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಹನುಮ ಧ್ವಜಗಳು, ಕೇಸರಿ ಬಂಟಿಂಗ್ಸ್ ಹಾಗೂ ಹನುಮನ ಬೃಹತ್ ಭಾವಚಿತ್ರಗಳಿರುವ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ.
ಗಂಜಾಂನ ಶ್ರೀ ಆಂಜನೇಯಸ್ವಾಮಿ ದೇವಾಲಯದ ಸನ್ನಿಧಿಯಿಂದ ಬೆಳಗ್ಗೆ 11ಕ್ಕೆ ಆರಂಭಗೊಳ್ಳಲಿದೆ. ಜ್ಯೋತಿಷಿ ಡಾ.ವಿ.ಭಾನುಪ್ರಕಾಶ್ ಶರ್ಮ ಯಾತ್ರೆಯ ಉಸ್ತುವಾರಿ ಹೊತ್ತಿರುವ ಮುಖಂಡರಾದ ಚಂದನ್, ರಾಂಪುರ ಶ್ಯಾಂ, ಬಾಲರಾಜು ಸೇರಿದಂತೆ ಹಲವರ ಸಮ್ಮುಖದಲ್ಲಿ ಚಾಲನೆ ನೀಡಲಿದ್ದಾರೆ. ಇದಕ್ಕೂ ಮೊದಲು ನಿಮಿಷಾಂಬ ದೇಗುಲ ಆವರಣದ ವೇದಿಕೆಯಲ್ಲಿ ಬೆಳಗ್ಗೆ 10ಕ್ಕೆ ಸಂಘ ಪರಿವಾರದ ವಿಭಾಗ ಸಂಚಾಲಕ ಲೋಹಿತ್ ರಾಜೇ ಅರಸ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಗಂಜಾಂನಿಂದ ಶ್ರೀರಂಗಪಟ್ಟಣದವರೆಗೂ ಸಹಸ್ರಾರು ಪೊಲೀಸರನ್ನು ನಿಯೋಜಿಸಲಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮತ್ತು ಚಾಮರಾಜನಗರ ಎಸ್ಪಿ ಬಿ.ಟಿ.ಕವಿತಾ ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಗಂಗಾಧರಸ್ವಾಮಿ ಹಾಗೂ ತಿಮ್ಮಯ್ಯ ನಿರ್ದೇಶನದಲ್ಲಿ ಸೇರಿದಂತೆ ನಾಲ್ವರು ಅಪರ ವರಿಷ್ಠಾಧಿಕಾರಿಗಳು, 9 ಜನ ಡಿವೈಎಸ್ಪಿ, 35 ಪೊಲೀಸ್ ಇನ್‌ಸ್ಪೆಕ್ಟರ್, 60 ಪಿಎಸ್‌ಐ, 123 ಎಎಸ್‌ಐ, ಸಂಚಾರಿ, 10 ಕೆಎಸ್‌ಆರ್‌ಪಿ ತುಕಡಿ, ಶಸ್ತ್ರಸಜ್ಜಿತ ಸಹಿತ 2(ಕ್ಯೂಆರ್‌ಟಿ) ಕ್ಷಿಪ್ರಕಾರ್ಯಪಡೆ ವಾಹನಗಳೊಂದಿಗೆ, 200 ಗೃಹರಕ್ಷಕ ದಳ ಸಿಬ್ಬಂದಿ ನಿಯೋಜಿಸಲಾಗಿದೆ.
ವಿವಿಧ ವೃತ್ತಗಳು, ಸೂಕ್ಮ ಪ್ರದೇಶಗಳು, ನೂರಕ್ಕೂ ಹೆಚ್ಚು ಕಡೆ ಸಿಸಿ ಕ್ಯಾಮರಾ ಅಳವಡಿಕೆ, 3 ಡ್ರೋನ್ ಕ್ಯಾಮರಾ ಕಾರ್ಯನಿರ್ವಹಿಸಲಿದೆ. ಯಾತ್ರೆ ತೆರಳುವ ಮಾರ್ಗದುದ್ದಕ್ಕೂ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ತಂಡ ಪರಿಶೀಲನೆ ನಡೆಸಿದೆ. ಪಟ್ಟಣಕ್ಕೆ ಆಗಮಿಸುವ ಎಲ್ಲ ವಾಹನಗಳನ್ನು ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸಲಿದ್ದಾರೆ.
ಪಟ್ಟಣದ ಮಸ್ಜೀದ್-ಎ-ಆಲಾ, ಗಂಜಾಂ ಸೇರಿದಂತೆ ಎಲ್ಲ ಮಸೀದಿಗಳು ಹಾಗೂ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಮಂಗಳವಾರ ಪೊಲೀಸರು ಪಥ ಸಂಚಲನ ನಡೆಸಿದರು.
ಡಿವೈಎಸ್ಪಿ ಶಾಂತಮಲ್ಲಪ್ಪ, ಶ್ರೀರಂಗಪಟ್ಟಣ ಟೌನ್ ಠಾಣೆ ಇನ್‌ಸ್ಪೆಕ್ಟರ್ ಬಿ.ಜಿ.ಕುಮಾರ್, ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಆನಂದ್ ಕುಮಾರ್, ಪಿಎಸ್‌ಐ ರಕ್ಷಿತಾ, ಅರಕೆರೆ ವೃತ್ತದ ಸರ್ಕಲ್ ಇನ್‌ಸ್ಪೆಕ್ಟರ್ ವಿವೇಕಾನಂದ, ಪಿಎಸ್‌ಐ ವಿನೋದ್ ಕುಮಾರ್, ಮಂಡ್ಯ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಬಿ.ಎಸ್.ಪ್ರಕಾಶ್ ಇದ್ದರು.