ನ್ಯೂಸ್

ಹೋದಲ್ಲೆಲ್ಲಾ ಜನರ ಗಮನ ಸೆಳೆಯುತ್ತಿರುವ ಶ್ರೀರಾಮುಲು ಮಾಸ್ಕ್! ಅಮೆರಿಕದಿಂದ ತರಿಸಿದ್ದಾರಂತೆ...

lakshmihegde

ಶಿವಮೊಗ್ಗ: ಕರೊನಾ ಹಾವಳಿ ಹಿನ್ನೆಲೆಯಲ್ಲಿ ಈಗ ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯ. ಪ್ರಧಾನಿ ಮೋದಿ ಅವರಿಂದ ಹಿಡಿದು ಮುಖ್ಯಮಂತ್ರಿ ಯಡಿಯೂರಪ್ಪ ಅವರವರೆಗೆ ಎಲ್ಲರೂ ಈಗ ಮಾಸ್ಕ್ ಧಾರಿಗಳಾಗಿಯೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ.

ಇವರು ಧರಿಸುವ ಮಾಸ್ಕ್‌ಗಳು ಹೇಗಿವೆ ಎಂಬುದರ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ಆದರೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಧರಿಸುತ್ತಿರುವ ಮಾಸ್ಕ್ ಮಾತ್ರ ಹೋದಲ್ಲೆಲ್ಲ ಜನರ ಗಮನ ಸೆಳೆಯುತ್ತಿದೆ. ಚರ್ಚೆಗೂ ಗ್ರಾಸವಾಗುತ್ತಿದೆ. ಅಂಥದ್ದೇನಿದೆ ಅದರಲ್ಲಿ ಅಂತೀರಾ?

ಅದು ಕರ್ನಾಟಕದಲ್ಲಿಯಾಗಲಿ, ಭಾರತದಲ್ಲಿಯಾಗಲಿ ಖರೀದಿಸಿದ್ದಲ್ಲ. ಅಮೆರಿಕದಿಂದ ತರಿಸಿದ್ದು. ಕರೊನಾ ಹಾವಳಿ ಹೆಚ್ಚಾಗುತ್ತಿದ್ದಂತೆಯೇ ಅಮೆರಿಕದಲ್ಲಿರುವ ಶ್ರೀರಾಮುಲು ಅವರ ಸ್ನೇಹಿತರೊಬ್ಬರು ವಿಶೇಷವಾಗಿ ಅದನ್ನು ಕೊಡುಗೆ ನೀಡಿದ್ದಾರಂತೆ! ಇದು ಸಿಂಥೆಟಿಕ್ ವಸ್ತುವಿನಿಂದ ಮಾಡಿರುವ ಮಾಸ್ಕ್ ಅಂತೆ.

ಸ್ವಚ್ಛಗೊಳಿಸಿ ಮರು ಬಳಕೆ ಮಾಡಬಹುದಾದ ಈ ಮಾಸ್ಕ್ ಅನ್ನು ಕನಿಷ್ಠ ಆರು ತಿಂಗಳ ಕಾಲ ಉಪಯೋಗಿಸಬಹುದಂತೆ. ಎರಡು ಬದಿಯಲ್ಲಿ ಎರಡು ವಿಭಾಗಗಳಿವೆ. ಮಧ್ಯದಲ್ಲಿ ಮೈಕ್ರೋಫೋನ್ ಕೂಡ ಇದೆ! ಒಂದು ಬದಿಯಲ್ಲಿ ಮಾಸ್ಕ್‌ನೊಳಕ್ಕೆ ಗಾಳಿ ಪ್ರವೇಶಿಸುತ್ತದೆ. ಮತ್ತೊಂದು ತುದಿಯಲ್ಲಿ ಮೂರು ಏರ್ ಫಿಲ್ಟರ್‌ಗಳಿವೆ!!
ಈ ರೀತಿಯ ಮಾಸ್ಕ್‌ನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಕೂಡ ಇದುವರೆಗೆ ಎಲ್ಲೂ ನೋಡಿಲ್ಲವಂತೆ.

ಕರೊನಾ ವೈರಸ್ ಪೀಡಿತರು ಬಳಸುವ ಎನ್-95 ಎಂಬ ಗುಣಮಟ್ಟದ ಮಾಸ್ಕ್‌ಗಿಂತಲೂ ಇದು ಅತ್ಯುತ್ತಮ ಗುಣಮಟ್ಟದ್ದೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಶನಿವಾರ ಶ್ರೀರಾಮುಲು ಶಿವಮೊಗ್ಗಕ್ಕೆ ಬಂದಿದ್ದಾಗಲೂ ಸುತ್ತಮುತ್ತ ಇದ್ದವರೆಲ್ಲರೂ ಅವರ ಮಾಸ್ಕ್ ಬಗ್ಗೆಯೇ ಮಾತನಾಡುತ್ತಿದ್ದರು.