ಧಾರವಾಡ: ಮೀಸಲಾತಿ ಎನ್ನುವುದು ಜೇನುಗೂಡು ಇದ್ದಂತೆ, ಅದಕ್ಕೆ ಕಲ್ಲು ಹಾಕಿದರೆ ಕಚ್ಚಿ ಸಾಯಿಸಿಬಿಡುತ್ತವೆ ಎಂಬುದಾಗಿ ಸಚಿವ ಶ್ರೀರಾಮುಲು ಹೇಳಿದ್ದಾರೆ. ಧಾರವಾಡದಲ್ಲಿ ನಡೆದ ಬಿಜೆಪಿ ಎಸ್ಟಿ ಮೋರ್ಚಾ ಸಮಾವೇಶದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.
ಮೀಸಲಾತಿ ವಿಚಾರವಾಗಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಅಂದರೆ ಬ್ರಾಹ್ಮಣರ ಪಕ್ಷ, ಲಿಂಗಾಯತರ, ಮುಂದುವರಿದ ಜಾತಿಗಳ ಪಕ್ಷ ಅಂತ ಯಾರೋ ಬೊಬ್ಬೆ ಹೊಡೆಯುತ್ತ ಇದ್ದರು. ಹೀಗೆ ಹೇಳುತ್ತಲೇ ಅವರು ನಮ್ಮನ್ನು ಆಳಿದ್ದರು. ಅಂಬೇಡ್ಕರ್ ಭಾವಚಿತ್ರ ಇಟ್ಟುಕೊಂಡು ಎಸ್ಸಿ-ಎಸ್ಟಿ ಮತ ಪಡೆದರು. ಹಿಂದುಳಿದ ಸಮಾಜದ ಸ್ವಯಂಘೋಷಿತ ನಾಯಕ ಅಂತನೂ ಹೇಳಿಕೊಂಡರು, ಹಿಂದುಳಿದ ನಾಯಕ ಎಂದು ಹೇಳಿಕೊಂಡು ಸಿಎಂ ಕೂಡ ಆದರು. ಆದರೆ ಏನು ಮಾಡಿದ್ದೀರಿ ಎಂದು ಶ್ರೀರಾಮುಲು ಪ್ರಶ್ನಿಸಿದರು.
ಇನ್ನು ಎಸ್ಸಿ-ಎಸ್ಟಿಗೆ ಮೀಸಲಾತಿ ಹೆಚ್ಚಳ ಮಾಡಿದ್ದನ್ನು ಸಮರ್ಥಿಸಿಕೊಂಡ ಶ್ರೀರಾಮುಲು, ಮೀಸಲಾತಿ ಎನ್ನುವುದು ಜೇನುಗೂಡು ಇದ್ದಂತೆ, ಅದಕ್ಕೆ ಕಲ್ಲು ಹಾಕಿದರೆ ಕಚ್ಚಿ ಸಾಯಿಸಿ ಬಿಡುತ್ತವೆ. ಮಾಮೂಲಿ ಹುಳಗಳು ಕಡಿದರೆ ಬದುಕಬಹುದು, ಆದರೆ ಕಾಡಿನಲ್ಲಿರುವ ಹೆಜ್ಜೇನು ತುಂಬಾ ಅಪಾಯಕಾರಿ. ಅಂತಹ ಹೆಜ್ಜೇನಿನ ಗೂಡಿಗೆ ಕೈ ಹಾಕುವುದು ಎಂದರೆ ಎಷ್ಟು ಕಷ್ಟ ಯೋಚನೆ ಮಾಡಿ? ಎಂದು ಹೇಳಿದರು.
ಈ ಮೀಸಲಾತಿ ಹೆಚ್ಚಳ ವಿಚಾರ ಇವತ್ತು ಗೊತ್ತಾಗುವುದಿಲ್ಲ. ಇನ್ನೊಂದು 10-15 ವರ್ಷ ಕಳೆಯಲಿ. ಆಗ ನಮ್ಮ ಮಕ್ಕಳು ನೌಕರಿಗೆ ಹೋದಾಗ ಸಂತೋಷ ಆಗುತ್ತದೆ. ಆಗ ಬಿಜೆಪಿ ತೆಗೆದುಕೊಂಡ ತೀರ್ಮಾನ ಐತಿಹಾಸಿಕ ಎಂಬುದು ಗೊತ್ತಾಗುತ್ತದೆ ಎಂದು ಶ್ರೀರಾಮುಲು ಹೇಳಿದರು.