ನ್ಯೂಸ್

ಶ್ರೀನಿವಾಸಪ್ರಸಾದ್ ಪಕ್ಷಾತೀತ, ಜಾತ್ಯತೀತ ವ್ಯಕ್ತಿ

ಕೆ.ಆರ್.ನಗರ: ದಿ.ಶ್ರೀನಿವಾಸ್‌ಪ್ರಸಾದ್ ವ್ಯಕ್ತಿಯಲ್ಲ ಶಕ್ತಿಯಾಗಿದ್ದು, ಸಮಾಜದ ಪರಿವರ್ತನೆಗಾಗಿ ಶೋಷಿತರು, ಬಡವರು, ಧಮನಿತರ ಪರವಾಗಿ ಧ್ವನಿಯಾಗಿ ನಿಂತಂತಹ ಸ್ವಾಭಿಮಾನಿ ರಾಜಕೀಯ ಮುತ್ಸದ್ಧಿ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ದಿ. ವಿ.ಶೀನಿವಾಸಪ್ರಸಾದ್ ಅವರ ನೆನಪು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ತಮ್ಮ ಜೀವಿತಾವಧಿಯಲ್ಲಿ ನೇರ ನಿಷ್ಟೂರವಾದಿಯಾಗಿ ನಡೆದುಕೊಂಡು 50ವರ್ಷಗಳ ಸುದೀರ್ಘ ರಾಜಕೀಯ ಜೀವನವನ್ನ ನಡೆಸಿದ್ದಾರೆ.

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಗಳು, ತತ್ವ ಸಿದ್ಧಾಂತಗಳನ್ನು ತಮ್ಮಲ್ಲಿ ಅಳವಡಿಸಿಕೊಂಡು ಶ್ರೀನಿವಾಸ ಪ್ರಸಾದ್ ಬದುಕು ಸವೆಸಿದ್ದಾರೆ ಎಂದು ಬಣ್ಣಿಸಿದರು. ಅವರು ಕೇವಲ ಒಂದು ಪಕ್ಷಕ್ಕೆ ಸೀಮಿತವಾಗದೇ ಪ್ರತಿಯೊಬ್ಬರನ್ನು ಗೌರವದಿಂದ ಕಾಣುತಿದ್ದರು. ಪ್ರತಿಯೊಬ್ಬರು ಶಿಕ್ಷಿತರಾದರೇ ಮಾತ್ರ ಸಮಾಜ ಸುಧಾರಣೆ ಸಾಧ್ಯ. ಪ್ರತಿಯೊಬ್ಬರು ಬುದ್ಧ, ಬಸವ, ಅಂಬೇಡ್ಕರ್ ಮಾರ್ಗದಲ್ಲಿ ನಡೆಯಬೇಕು ಎಂಬ ಹಂಬಲ ಹೊಂದಿದ್ದರು ಎಂದರು.

ಶ್ರೀನಿವಾಸ್ ಪ್ರಸಾದ್ ವಿದ್ಯಾರ್ಥಿ ಜೀವನದಿಂದಲೇ ಹೋರಾಟ, ಚಳವಳಿಗಳ ಮೂಲಕ ಗುರುತಿಸಿಕೊಂಡು ರಾಜಕೀಯಕ್ಕೆ ಬಂದವರು. ಯಾವುದೇ ಪಕ್ಷದಲ್ಲಿದ್ದರೂ ಸ್ವಾಭಿಮಾನ, ಸಿದ್ಧಾಂತವನ್ನು ಕೈ ಬಿಡಲಿಲ್ಲ. ಯುವ ರಾಜಕಾರಣಿಗಳಿಗೆ ಮಾರ್ಗದರ್ಶಕರಾಗಿದ್ದರು ಎಂದರು.
ಕೆಪಿಸಿಸಿ ಕಾರ್ಯಕಾರಣಿ ಸದಸ್ಯ ದೊಡ್ಡಸ್ವಾಮೇಗೌಡ ಮಾತನಾಡಿ, ಶ್ರೀನಿವಾಸ್‌ಪ್ರಸಾದ್ ಅವರು ಬುದ್ಧ, ಬಸವ, ಅಂಬೇಡ್ಕರ್ ತತ್ವದ ಮೇಲೆ ರಾಜಕೀಯ ಮಾಡಿದಂತಹ ಆದರ್ಶ ರಾಜಕಾರಣಿ. ಅವರ ಮಾರ್ಗದರ್ಶನ ಎಲ್ಲರಿಗೂ ಅವಶ್ಯಕವಾಗಿತ್ತು ಎಂದರು. ಅವರ ಸರಳ ಜೀವನ, ಸಜ್ಜನಿಕೆ ವ್ಯಕ್ತಿತ್ವ, ಸ್ವಾಭಿಮಾನದ ಸಂಕೇತವಾಗಿದ್ದವು ಎಂದರು.

ಜಿ.ಪಂ. ಮಾಜಿ ಸದಸ್ಯ ಮಾರ್ಚಳ್ಳಿ ಶಿವರಾಮ್, ತಾ.ಪಂ. ಮಾಜಿ ಅಧ್ಯಕ್ಷ ಎಂ.ಎಚ್.ಸ್ವಾಮಿ, ಕಾಂಗ್ರೆಸ್ ರಾಜ್ಯ ಎಸ್‌ಟಿ ಘಟಕದ ಉಪಾಧ್ಯಕ್ಷ ಕಲ್ಲಹಳ್ಳಿ ಶ್ರೀನಿವಾಸ್, ಸಾಲಿಗ್ರಾಮ ಬ್ಲಾಕ್ ಎಸ್ಸಿ ಘಟಕದ ಅಧ್ಯಕ್ಷ ಕಂಠಿಕುಮಾರ್, ಮುಖಂಡ ಡಿ.ಕೆ.ಕೊಪ್ಪಲು ರಾಜಯ್ಯ, ಸಿದ್ದಯ್ಯ, ಶಾಂತಿರಾಜಯ್ಯ, ಕಾಂತರಾಜ್, ಸಿ.ಪಿ.ರಮೇಶ್, ಕೆ.ಜಿ.ಸುಬ್ರಮಣ್ಯ, ಚೀರ‌್ನಹಳ್ಳಿ ಶಿವಣ್ಣ, ಎಂ.ಎಸ್.ಮಹದೇವ್, ಉದಯ್‌ಶಂಕರ್, ಎಂ.ಜೆ.ರಮೇಶ್ ಇತರರು ಇದ್ದರು.