ಆದರ್ಶ ಕುಟುಂಬಂ ಚಿತ್ರದ ಪೋಸ್ಟರ್
- ತೆಲುಗಿನಲ್ಲಿ ಬಿಜಿಯಾದ ಕರಾವಳಿ ಮೂಲದ ನಟಿ ಶ್ರೀನಿಧಿ ಶೆಟ್ಟಿ
- ‘ಆದರ್ಶ ಕುಟುಂಬಂ: ಹೌಸ್ ನಂ. 47’ ಚಿತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲು ಸಿದ್ಧರಾದ ನಟಿ
- ಇದೇ ಮೊದಲ ಬಾರಿಗೆ ಗ್ಲಾಮರ್ ಅನಿಸದ ಸರಳ ಪಾತ್ರದಲ್ಲಿ ಕೆಜಿಎಫ್ ನಟಿ
‘ಕೆಜಿಎಫ್’ ಬಳಿಕ ನಟಿ ಶ್ರೀನಿಧಿ ಶೆಟ್ಟಿ ಸ್ಯಾಂಡಲ್‌ವುಡ್‌ಗಿಂತ ಪರಭಾಷೆಯಲ್ಲಿಯೇ ಬಿಜಿಯಾಗಿದ್ದಾರೆ. ಎಂಟು ವರ್ಷಗಳ ಸಿನಿ ಕೆರಿಯರ್‌ನಲ್ಲಿ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಗಮನಾರ್ಹ ಪಾತ್ರಗಳಿಂದ ಅವರು ಗುರುತಿಸಿಕೊಳ್ಳುತ್ತಿದ್ದಾರೆ. ‘ಕೆಜಿಎ್’ ಬಳಿಕ ತಮಿಳಿನ ‘ಕೋಬ್ರಾ’, ತೆಲುಗಿನ ‘ಹಿಟ್: ದ ಥರ್ಡ್ ಕೇಸ್’, ‘ತೆಲುಸಾ ಕದಾ’ ನಟಿಸಿದ್ದ ಶ್ರೀನಿಧಿ ಇದೀಗ ತೆಲುಗಿನ ‘ಆದರ್ಶ ಕುಟುಂಬಂ: ಹೌಸ್ ನಂ. 47’ ಚಿತ್ರದ ಮೂಲಕ ನಟಿ ತೆರೆ ಮೇಲೆ ಕಾಣಿಸಿಕೊಳ್ಳಲು ಸಿದ್ಧರಾಗುತ್ತಿದ್ದಾರೆ. ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಆ್ಯಕ್ಷನ್-ಕಟ್ ಹೇಳಿರುವ ಈ ಕುಟುಂಬ ಪ್ರಧಾನ ಸಿನಿಮಾದಲ್ಲಿ ವಿಕ್ಟರಿ ವೆಂಕಟೇಶ್ ಮುಖ್ಯಭೂಮಿಕೆಯಲ್ಲಿದ್ದಾರೆ. ಅವರಿಗೆ ಶ್ರೀನಿಧಿ ಶೆಟ್ಟಿ ಜೋಡಿಯಾಗಿದ್ದಾರೆ. ಇದಕ್ಕೂ ಮುನ್ನ ಶ್ರೀನಿಧಿ ಈ ಚಿತ್ರದಲ್ಲಿರುವುದು ಗೊತ್ತಿತ್ತು. ಆದರೆ, ನಟಿಯ ಲುಕ್ ರಿವೀಲ್ ಆಗಿರಲಿಲ್ಲ. ಇದೀಗ ಚಿತ್ರತಂಡವು ರಿಲೀಸ್ ಡೇಟ್ ಅನೌನ್ಸ್ ಮಾಡಲು ಹೊಸ ಪೋಸ್ಟರ್ ರಿಲೀಸ್ ಮಾಡಿದ್ದು, ಅದರಲ್ಲಿ ನಟಿಯ ಲುಕ್ ರಿವೀಲ್ ಆಗಿದೆ. ಇಲ್ಲಿ ಶ್ರೀನಿಧಿ ಶೆಟ್ಟಿ ಗೃಹಿಣಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈವರೆಗೆ ಗ್ಲಾಮರ್ ರೂಪದಲ್ಲಿ ಕಾಣಿಸಿಕೊಂಡಿದ್ದ ಅವರು ಇದೇ ಮೊದಲ ಬಾರಿಗೆ ಗ್ಲಾಮರ್ ಅನಿಸದ ಸರಳ ಪಾತ್ರದಲ್ಲಿದ್ದಾರೆ. ಪೋಸ್ಟರ್‌ನಲ್ಲಿ ಶ್ರೀನಿಧಿ ಜತೆಗೆ ವಿಕ್ಟರಿ ವೆಂಕಟೇಶ್, ಪೂಜಿತಾ ಪೊನ್ನಂಡ ಕಾಣಿಸಿಕೊಂಡಿದ್ದಾರೆ. ಇದೇ ಅಕ್ಟೋಬರ್ 2ರ ಗಾಂಧಿಜಯಂತಿಯಂದು ‘ಆದರ್ಶ ಕುಟುಂಬಂ: ಹೌಸ್ ನಂ 47’ ಚಿತ್ರ ತೆರೆಗೆ ಬರಲಿದೆ. -ಏಜೆನ್ಸೀಸ್